ಉದಯ್ಪುರ್: ಕೋಟಿ ಕೋಟಿ ಹಣತೆತ್ತಿ ಖರೀದಿಸಿದ ಕಾರು ಒಂದು ತಿಂಗಳಲ್ಲೇ ಹಲವು ತಾಂತ್ರಿಕ ದೋಷಕ್ಕೆ ಸಿಲುಕಿ ಕೆಟ್ಟು ನಿಂತಿದ್ದರಿಂದ ಬೇಸತ್ತ ಕಾರು ಮಾಲೀಕ ಕತ್ತೆಗಳ ಮೂಲಕ ಶೋರೂಂಗೆ ಎಳೇದು ತಂದಿದ್ದಾರೆ.
ದುಬಾರಿ ಹಣ ಕೊಟ್ಟು ಖರೀದಿಸಿದ ಕಾರು ಒಂದು ತಿಂಗಳಲ್ಲಿಯೇ ಕೆಟ್ಟು ಹೋಗಲು ಹೇಗೆ ಸಾಧ್ಯ ಎಂದು ಅಶ್ಚರ್ಯ ಪಡಬೇಡಿ. ಏಕೆಂದರೆ ಕೆಟ್ಟಿರುವ ಕಾರನ್ನು ಕತ್ತೆಗಳ ಮೂಲಕ ಶೋರೂಂಗೆ ತರುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ಆಗಿದೆ.
ಹೌದು! ಕಾರಿನಲ್ಲಿ ಬಹಳಷ್ಟು ತಾಂತ್ರಿಕ ದೋಷ ಕಂಡು ಬಂದಿದೆ. ಈ ವೇಳೆ ಕಾರು ಮಾಲೀಕ ಶೋರೂಂನವರ ಬಳಿ ವಿಷಯ ತಿಳಿಸಿ ತಾಂತ್ರಿಕ ದೋಷ ಸರಿಪಡಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಶೋರೂಂನವರು ಸಮರ್ಪಕವಾಗಿ ಸ್ಪಂದಿಸಿಲ್ಲ. ಇದರಿಂದ ಕುಪಿತಗೊಂಡ ಮಾಲೀಕ ಎರಡು ಕತ್ತೆಯನ್ನು ಬಾಡಿಗೆಗೆ ಪಡೆದು ಕಾರನ್ನು ಶೋರೂಂವರೆಗೆ ಎಳೆದು ತಂದು ಮುಂದೆ ನಿಲ್ಲಿಸಿದ್ದಾರೆ. ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ.
ರಾಜಸ್ಥಾನದ ರಣಬಿಸಿಲು ಹಾಗೂ ಸಂಚಾರ ದಟ್ಟಣೆಯ ನಡುವೆಯೇ ಎರಡು ಕತ್ತೆಗಳನ್ನು ಬಳಸಿ ಐಶಾರಾಮಿ ಕಾರನ್ನು ಶೋರೂಂಗೆ ಎಳೆದು ತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದರೆ ಮಾಲೀಕನಿಗೆ ಎಷ್ಟು ಸಿಟ್ಟು ಬಂದಿರಬಹುದು.
ಕಾರು ಮಾಲೀಕ ಉದಯ್ಪುರ್ ನಿವಾಸಿ ರಾಜ್ ಕುಮಾರ್ ಗಯಾರಿ ಎಂದು ಹೇಳಲಾಗುತ್ತಿದೆ. ಗಯಾರಿ ಮಂಗಳವಾರ ತನ್ನ ಐಶಾರಾಮಿ ಕಾರನ್ನು ಕತ್ತೆಯ ಮೂಲಕ ಡೋಲು ಬಾರಿಸುತ್ತಾ ಎಳೆದೊಯ್ದಿರುವುದಾಗಿ ವರದಿ ತಿಳಿಸಿದೆ.