NEWS

ಚಿತ್ರದುರ್ಗ ಜಿಲ್ಲೆಯಲ್ಲಿ ಓರ್ವರಿಗೆ ಕೋವಿಡ್-19 ಸೊಂಕು 

ಭೀಮಸಮುದ್ರ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ: DC ವಿನೋತ್ ಪ್ರಿಯಾ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದಲ್ಲಿ ಓರ್ವ ಮಹಿಳೆಗೆ ಕೋವಿಡ್-19 ಸೋಂಕು ತಾತ್ಕಾಲಿಕ ಪಾಸಿಟಿವ್ ಆಗಿದೆ ಎಂದು ವರದಿ ಬಂದಿದ್ದು, ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭೀಮಸಮುದ್ರದ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಿ, ಈ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ಸಂಪೂರ್ಣ ಕಟ್ಟೆಚ್ಚರ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಸ್ಥಿತಿಗತಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಭೀಮಸಮುದ್ರದ ಓರ್ವ ಮಹಿಳೆ (35 ವರ್ಷ) ಇವರಿಗೆ ಕೋವಿಡ್-19 ಸೋಂಕು ತಾತ್ಕಾಲಿಕ ಪಾಸಿಟೀವ್ ಎಂಬ ವರದಿ ಬಂದಿದೆ.  ಇವರು ಕಳೆದ ಮಾ. 20 ರಂದು ಆಗಮಿಸಿದ್ದು, ಇವರು ಗಯಾನ ದೇಶದಿಂದ ನ್ಯೂಯಾರ್ಕ್‍ಗೆ ನಂತರ ದೆಹಲಿಗೆ ವಿಮಾನದ ಮೂಲಕ ಆಗಮಿಸಿದ್ದರು.

ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದ ಥರ್ಮಲ್ ಸ್ಕ್ರೀನಿಂಗ್‍ನಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿರಲಿಲ್ಲ.  ಹೀಗಾಗಿ ದೆಹಲಿಯಿಂದ ತಮ್ಮ ಇಬ್ಬರು ಮಕ್ಕಳು ಹಾಗೂ ಅವರ ತಂದೆ ಮತ್ತು ಕುಟುಂಬದ ಇತರೆ ಇಬ್ಬರು ಸದಸ್ಯರೊಂದಿಗೆ ಒಟ್ಟಿಗೆ ವಿಮಾನದಲ್ಲಿ ಆಗಮಿಸಿದ್ದರು.

ಮಾ. 22 ರಂದು ಒಟ್ಟು 4 ಜನರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.  ಇದರಲ್ಲಿ ಮೂವರಿಗೆ ನೆಗಟಿವ್ ಹಾಗೂ ಒಬ್ಬರ ವರದಿ ತಾತ್ಕಾಲಿಕ ಪಾಸಿಟಿವ್ ಎಂದು ಬಂದಿದೆ.

ಸೋಂಕಿತರೂ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರನ್ನೂ ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಪಾಸಿಟಿವ್ ವರದಿ ಬಂದಿರುವ ಮಹಿಳೆಗೆ ದಾವಣಗೆರೆಯ ಆಸ್ಪತ್ರೆಗೆ ಸ್ಥಳಾಂತರಿಸಲು ಮಹಿಳೆಯ ತಂದೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರದ ಗಮನಕ್ಕೆ ತಂದು ಇವರನ್ನು ದಾವಣಗೆರೆಯ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.

ಸೋಂಕಿತರ ಸಂಪೂರ್ಣ ಟ್ರ್ಯಾವೆಲ್ ಹಿಸ್ಟರಿ ಹಾಗೂ ಇವರೊಂದಿಗೆ ಮೊದಲನೆ ಹಾಗೂ ಎರಡನೆ ಸಂಪರ್ಕಿತರ ವಿವರವನ್ನು ವಿಳಾಸ ಸಹಿತ ಪತ್ತೆ ಮಾಡಲು ಈಗಾಗಲೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿದೆ.  ಸಂಪೂರ್ಣ ವಿವರ ಪಡೆದು, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಭೀಮಸಮುದ್ರ 5 ಕಿ.ಮೀ. ಬಫರ್ ಜೋನ್

ಭೀಮಸಮುದ್ರದ ಓರ್ವರಿಗೆ ಕೋವಿಡ್ 19 ತಾತ್ಕಾಲಿಕ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಈ ಗ್ರಾಮದ ವ್ಯಾಪ್ತಿಯಲ್ಲಿ 5 ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದ್ದು, ಈ ವ್ಯಾಪ್ತಿಯ ಗಡಿಯನ್ನು ನಿಗದಿಪಡಿಸಿ, ಈ ವ್ಯಾಪ್ತಿಯ ಎಲ್ಲ ಮನೆಯ ಜನರಿಗೆ ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ಮಾಡಲು ಸೂಚನೆ ನೀಡಲಾಗಿದೆ.

ಅಲ್ಲದೆ ಈ ವ್ಯಾಪ್ತಿಯೊಳಗೆ ಇತರೆ ಯಾರೂ ಬರುವುದಾಗಲಿ, ಅಥವಾ ಇಲ್ಲಿಂದ ಹೊರಗಡೆ ಹೋಗುವುದಾಗಲಿ ಮಾಡಲು ಅವಕಾಶ ಇರುವುದಿಲ್ಲ. ಜನರೂ ಕೂಡ ಮನೆಯಿಂದ ಹೊರಗಡೆ ಬರದೆ, ಮನೆಯಲ್ಲಿಯೇ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು.

ಇಲ್ಲಿನ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಲಿದೆ.  ಅಲ್ಲದೆ ಇಲ್ಲಿನ ಜನರ ಮೇಲಿ ನಿಗಾ ವಹಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಕೂಡ ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಕುಮಾರಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ