ಹುಬ್ಬಳ್ಳಿ: ರಾಜ್ಯವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಅಸಮಾಧಾನ ಸ್ಪೋಟಗೊಂಡಿದ್ದು ಹಲವು ಮುಖಂಡರು ಪಕ್ಷ ತೊರೆದರೇ ಹಲವು ಮುಖಂಡರು ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗೆಯೇ ಟಿಕೆಟ್ ಮಿಸ್ ಆಗುವ ಭೀತಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿ ದೆಹಲಿಗೆ ತೆರಳಿ ಪಕ್ಷದ ವರಿಷ್ಟರ ಬಳಿ ಮಾತಕತೆ ನಡೆಸಿದ್ದರು.
ಆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಬೊಮ್ಮಾಯಿ, ಉತ್ತರ ಕರ್ನಾಟಕ ಭಾಗಕ್ಕೆ ಶೆಟ್ಟರ್ ಬಹಳ ದೊಡ್ಡ ಶಕ್ತಿಯಾಗಿದ್ದಾರೆ, ಅವರನ್ನು ಪಕ್ಷ ಯಾವ ಕಾರಣಕ್ಕೂ ಕಳೆದುಕೊಳ್ಳಲು ತಯಾರಿಲ್ಲ ಎಂದರು.
ಇನ್ನು ಶೆಟ್ಟರ್ ಅವರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿದೆ, ಬೆಂಗಳೂರಲ್ಲೇ ಇರುವ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಜತೆ ತಾವು ಶೆಟ್ಟರ್ ವಿಷಯದಲ್ಲಿ ಚರ್ಚಿಸಿರುವುದಾಗಿ ಸಿಎಂ ಹೇಳಿದರು.
ನಾನು ಹಾಗೂ ಶೆಟ್ಟರ್ ಇಬ್ಬರೂ ಸ್ನೇಹಿತರು. ಶೆಟ್ಟರ್ ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ ಎಂದ ಅವರು, ಪಕ್ಷದ ರಾಷ್ಟ್ರೀಯ ಆಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ವರಿಷ್ಠ ನಾಯಕರೊಂದಿಗೂ ಮಾತುಕತೆ ನಡೆಸಿರುವುದಾಗಿ ಹೇಳಿದರು.