ತಿ.ನರಸೀಪುರ: ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತೆ ಮತ್ತೆ ಚಿರತೆಗಳು ಕಾಣಿಸಿಕೊಳ್ಳುತ್ತಲೇ ಇವೆ. ಆದರೂ ಅರಣ್ಯ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಏನೂ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು! ಮೈಸೂರಿನ ತಿ.ನರಸೀಪುರ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಮೀತಿ ಮೀರುತ್ತಿದೆ. ಒಂದು ತಿಂಗಳಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಇನ್ನು ಈ ಚಿರತೆಗಳ ಓಡಾಟ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.
![](https://vijayapatha.in/wp-content/uploads/2022/12/1-Dec-kebbehundi-300x180.jpg)
ಇದರ ನಡುವೆಯೇ ತಾಲೂಕಿನವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನಹುಂಡಿಯ 5 ಕಿ.ಮೀ.ಅಂತರದ ತಾಯೂರು ಗ್ರಾಮದಲ್ಲಿ ಚಿರತೆ ಕಾಣಿಸಿದೆ. ರಾತ್ರಿ ವೇಳೆ ತಮ್ಮ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿದ್ದವರು ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಚಿರತೆ ರಾಜಾರೋಷವಾಗಿ ಈ ಭಾಗದಲ್ಲಿ ಓಡಾಡುತ್ತಿದೆ. ರಾತ್ರಿ ಹಗಲೆನ್ನೆದೆ ಎಲ್ಲೆಲ್ಲೂ ಓಡಾಡುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಅನೇಕ ಜಾನುವಾರುಗಳನ್ನ ತಿಂದು ಹಾಕಿದೆ ಎನ್ನಲಾಗುತ್ತಿದೆ. ಅನೇಕ ಜನರ ಮೊಬೈಲ್ ಕ್ಯಾಮೆರಾದಲ್ಲಿ ಚಿರತೆ ಸೆರೆ ಸಿಕ್ಕಿದೆ.
ಈಗಾಗಲೇ ತಾಲೂಕಿನಲ್ಲಿ ಚಿರತೆಗೆ ಇಬ್ಬರು ಬಲಿಯಾದ ಬಳಿಕ ಎಚ್ಚೆತ ಸರ್ಕಾರ ಚಿರತೆ ಶೂಟೌಟ್ಗೆ ಆದೇಶ ನೀಡಿದ್ದು, ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ನಿರ್ದೇಶಿಸಿದೆ. ಅಂತೆಯೇ ಚಿರತೆ ದಾಳಿಯಿಂದ ಮೃತಪಟ್ಟ ಯುವತಿ ಮೇಘನಾ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಈ ಪರಿಹಾರದ ಪೈಕಿ 5 ಲಕ್ಷ ರೂಪಾಯಿ ಚೆಕ್ ಈಗಾಗಲೇ ವಿತರಿಸಲಾಗಿದ್ದು, ಮೃತ ಮೇಘನಾಳ ಕುಟುಂಬಕ್ಕೆ ಪ್ರತಿ ತಿಂಗಳು 2000 ರೂ.ನಂತೆ 5 ವರ್ಷ ಪಿಂಚಣಿ ನೀಡಲಾಗುತ್ತದೆ. ಮೃತ ಯುವತಿ ಮೇಘನಾಳ ಕುಟುಂಬಸ್ಥರಲ್ಲಿ ಒಬ್ಬರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗುವುದು. ಅದು ತಕ್ಷಣವೇ ಜಾರಿಗೆ ಬರಲಿದೆ ಎಂದು MCFO ಮಾಲತಿ ಪ್ರಿಯಾ ತಿಳಿಸಿದ್ದಾರೆ.
ಚಿರತೆ ಹಾವಳಿಯನ್ನು, ಮನುಷ್ಯರಿಗೆ ಪ್ರಾಣಕ್ಕೆ ತೊಂದರೆ ತಪ್ಪಿಸಲು ನರಸೀಪುರ ತಾಲೂಕಿನಲ್ಲಿ 15 ತಜ್ಞರ ತಂಡ ನೇಮಕ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಇನ್ನು ಬನ್ನೂರು – ನರಸೀಪುರ ಸಮೀಪದ ಗ್ರಾಮಗಳಲ್ಲಿ ಚಿರತೆಗಳನ್ನು ಸೆರೆ ಹಿಡಿಯುವುದಕ್ಕೆ ಬೋನ್ಗಳನ್ನು ಇಡಲಾಗಿದೆ ಎಂದು ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)