ತಿ.ನರಸೀಪುರ: ಟಿಕೆಟ್ ನಿರೀಕ್ಷೆಯಲ್ಲಿದ್ದ ವರುಣಾ ಕ್ಷೇತ್ರ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು ಬಿಜೆಪಿ ಟಿಕೆಟ್ ನಿರಾಕರಣೆಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪತ್ರ ಬರೆದು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ನಾನು ಈ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು,ವರುಣಾ ಕ್ಷೇತ್ರದಲ್ಲಿ ವಲಸಿಗರಿಗೆ ಬಿಜೆಪಿ ಮಣೆ ಹಾಕಿರುವುದರಿಂದ ಬೇಸತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.
2018ರಲ್ಲಿ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 35ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದು ,ನಾನು ಕ್ಷೇತ್ರಕ್ಕೆ ಚಿರಪರಿಚಿತನಾಗಿದ್ದೇನೆ. ಆದರೂ ವಲಸಿಗರಿಗೆ ಬಿಜೆಪಿ ಟಿಕೆಟ್ ನೀಡಿರುವುದು ನನಗೆ ತುಂಬ ದುಃಖವಾಗಿದೆ ಎಂದು ಗದ್ಗದಿತರಾದರು. ನಾನು ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೂ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ನಾನು ಬಿಜೆಪಿ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ಧ ಹಲವು ಟೀಕೆ ಟಿಪ್ಪಣಿಗಳನ್ನು ಮಾಡಿದ್ದು,ಬಿಜೆಪಿ ಪಕ್ಷದ ಸಕ್ರಿಯ ಸದಸ್ಯನಾಗಿ ಟೀಕೆ ಮಾಡುವ ಭರದಲ್ಲಿ ಅನುಚಿತ ಪದ ಬಳಕೆ ಮಾಡಿದ್ದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ನನ್ನನ್ನು ಕ್ಷಮಿಸುವಂತೆ ಮನವಿ ಮಾಡಿದರು.
ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ,ತಿ.ನರಸೀಪುರ ಕ್ಷೇತ್ರದ ಅಭ್ಯರ್ಥಿ ಡಾ.ರೇವಣ್ಣ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಲಿದ್ದೇನೆ. ಈ ಇಬ್ಬರು ಅಭ್ಯರ್ಥಿಗಳ ಗೆಲ್ಲಿವಿಗಾಗಿ ಅವಿರತ ಶ್ರಮವಹಿಸುವುದಾಗಿ ತಿಳಿಸಿದರು.