ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ 1.20ಲಕ್ಷ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು. ಆ ಸ್ಥಳಕ್ಕೆ ಸಾರಿಗೆ ಸಚಿವನಾಗಿ ನಾನು ಹೋಗಿದ್ದರೆ ಅವರ ಪ್ರತಿಭಟನೆ ಮುಗಿಯುತ್ತಿತ್ತು. ಆದರೆ, ನನಗೆ ಹೋಗದಂತೆ ದೊಡ್ಡವರು ಹೇಳಿದರು ಎಂದು ಲಕ್ಷ್ಮಣ ಸವದಿ ಸಮಾರಂಭದಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.
ಒಂದು ಕಡೆ ವಿಧಾನಸಭೆ ಅಧಿವೇಶನ ಪ್ರಾರಂಭವಿತ್ತು. ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿ ಹೋಗಿ ಅವರ ಮನವಿಯನ್ನು ಕೇಳಿದ್ದರೆ ಮುಗಿದುಹೋಗುತ್ತಿತ್ತು. ಆದರೆ, ನನಗೆ ಸಾರಿಗೆ ನೌಕರರ ಪ್ರತಿಭಟನಾ ಸ್ಥಳಕ್ಕೆ ಯಾವ ಕಾರಣಕ್ಕೂ ಅಲ್ಲಿಗೆ ಹೋಗಕೂಡದು ಎಂದು ಕಟ್ಟಪ್ಪಣೆ ಮಾಡಿದರು. ನಾನೂ ಕೂಡ ದೊಡ್ಡವರು ಹೇಳಿದ ಮೇಲೆ ಬಿಡಬೇಕು. ಹೋಗಲಿಲ್ಲ, ಪ್ರತಿಭಟನೆ ಮುಂದುವರಿಯಿತು.
ಸಾರಿಗೆ ನೌಕರರ ಪ್ರತಿಭಟನೆಗೆ ಮಹಾನುಭವ ರೈತ ಮುಖಂಡರೊಬ್ಬರು ಸೇರಿಕೊಂಡರು. ನನಗೆ ಇವರು ಯಾಕೆ ಬಂದರು ಎಂದು ಆಶ್ಚರ್ಯವಾಯಿತು. ಇನ್ನು ಅವರಿಗೆ ಅನೇಕ ಜನ ಹೇಳಿದರು ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸಬಾರದು ಈ ಲಕ್ಷ್ಮಣ ಸವದಿ ದಿಲ್ಲಿಯಿಂದ ಬಂದು ಉಪ ಮುಖ್ಯಮಂತ್ರಿಯಾಗಿದ್ದಾನಲ್ಲ ಇವನು ಮನೆಗೆ ಹೋಗುವವರೆಗೂ ಪ್ರತಿಭಟನೆ ನಿಲ್ಲಿಸಬಾರದು ಎಂದು ಹೇಳಿದ್ದರು. ಈ ಬಗ್ಗೆ ನನ್ನ ಹತ್ತಿರ ರೆಕಾರ್ಡ್ ಇದೆ, ದಾಖಲೆಯಿದೆ ಎಂದು ಹೇಳಿದರು.
ಪಾಪ 1.20ಲಕ್ಷ ಸಾರಿಗೆ ನೌಕರರು ನನಗೆ ಶಾಪ ಹಾಕಲು ಶುರುಮಾಡಿದರು. ನನಗೆ ಸಂಬಳ ಹೆಚ್ಚು ಮಾಡಲಿಕ್ಕೂ ಆಗಲಿಲ್ಲ, ಇತ್ತ ಪ್ರತಿಭಟನೆ ನಿಲ್ಲಿಸುವುದಕ್ಕೂ ಆಗಲಿಲ್ಲ. ಒಂದು ಹಂತ ಮುಗಿಯಿತು. ಇನ್ನು ಅಂದು ನೌಕರರು ಹಾಕಿದ ಶಾಪವೆ ಇಂದು ನನಗೆ ಈ ಸ್ಥಿತಿ ಬರುವುದಕ್ಕೆ ಕಾರಣವಾಗಿದೆ ಎಂದು ನೊಂದು ನುಡಿದರು.
ಸಾರಿಗೆ ನೌಕರರ ಶಾಪಕ್ಕೆ ಗುರಿಯಾದರೆ ಎಂಥ ಪರಿಸ್ಥಿತಿ ಬರುತ್ತದೆ ಎಂಬುವುದು ಈಗ ನನಗೆ ಅರಿವಾಗಿದೆ ಎಂಬ ರೀತಿಯಲ್ಲಿ ನಿಕಟ ಪೂರ್ವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಮಾರಂಭ ಒಂದರಲ್ಲಿ ಹೇಳುತ್ತಿರುವುದು ಈಗ ಎಲ್ಲ ಸಾರಿಗೆ ನೌಕರರಿಗೂ ಗೊತ್ತಾಗಿದೆ. ಅಂದರೆ, ಇಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳವಾಗದಂತೆ ಅನೇಕ ಜನ ತಡೆದಿದ್ದಾರೆ ಎಂದರೆ ಅವರು ಯಾರು ಎಂಬ ಪ್ರಶ್ನೆ ಮೂಡುತ್ತದೆ.
ಒಂದು ಕಡೆ ಸಚಿವ ಸ್ಥಾನ ವಂಚಿತ ಬಿಜೆಪಿಯ ಶಾಸಕರು ಇದ್ದರೆ, ಅವರಿಗೆ ಸಾಥ್ ನೀಡುವಂತೆ ನೌಕರರಿಗೆ 6ನೇ ವೇತನ ಆಯೋಗ ಜಾರಿ ಆಗಬಾರದು ಎಂದು ಕುತಂತ್ರ ಮಾಡುತ್ತಿದ್ದ ಸಾರಿಗೆ ನೌಕರರ ಎಂಜಲು ಕಾಸಿಗೆ ಬಾಯಿಬಿಟ್ಟುಕೊಂಡು ಈಗಲೂ ಕೂತಿರುವ ಸಂಘಟನೆಗಳ ಕೆಲ ಮುಖಂಡರು ಸರ್ಕಾರದ ಅಂದಿನ ಮುಖ್ಯಮಂತ್ರಿಯ ಕಿವಿಗೆ ಊದಿದರು.
ಅದರ ಪರಿಣಾಮ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದರೆ ಅವರ ಸಮಸ್ಯೆಯನ್ನು ಆಲಿಸುವ ಸೌಜನ್ಯವನ್ನು ತೋರಲಿಲ್ಲ ಅದು ಹೋಗಲಿ ಸಾರಿಗೆ ಸಚಿವರನ್ನಾದರೂ ಕಳುಹಿಸಬಹುದಾಗಿತ್ತು ಅದನ್ನು ಮಾಡಲಿಲ್ಲ. ಅದು ಹೋಗಲಿ ಪ್ರತಿಭಟನಾ ನಿರತ ನೌಕರರ ಮುಖಂಡರನ್ನಾದರೂ ಕರೆಸಿಕೊಂಡು ಮಾತನಾಡಬಹುದಿತ್ತು ಅದನ್ನೂ ಮಾಡಲಿಲ್ಲ ಅಂದಿನ ಸಿಎಂ.
ಅಂದಿನ ಸಿಎಂ ಅವರ ನಡೆಯಿಂದ ಸಾರಿಗೆ ನೌಕರರ ಪ್ರತಿಭಟನೆ ಕಾವು ಹೆಚ್ಚಾಗುತ್ತಲೇ ಹೋಯಿತು. ಇನ್ನು ಅವರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೊರೊನಾ ಮಹಾ ಮಾರಿಯನ್ನು ಎಳೆತಂದರು. ಅದರಿಂದ ಅಲ್ಲಿಯವರೆಗೂ ಒಗ್ಗಟ್ಟಾಗಿದ್ದ ಸಾರಿಗೆ ನೌಕರರನ್ನು ಒಡೆದು ಹಾಳು ಮಾಡುವ ಕೆಲ ಸಂಘಟನೆಗಳ ಮುಖಂಡರ ಹುನ್ನಾರ ಫಲಿಸಿತು.
ಆ ಬಳಿಕ ಕೂಟದಲ್ಲಿದ್ದ ಅನೇಕರು ಕೂಟದಿಂದ ಹೊರಬಂದರು. ಆದರೂ ಅವರಿಗೆ ಸರ್ಕಾರದ ಕಿವಿ ಊದಿದವರ ಬಗ್ಗೆ ತಿಳಿಯಲೇ ಇಲ್ಲ. ಈಗಲೂ ಅದರ ಅರಿವಿಲ್ಲದ ಕೆಲವರು ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತೆಗೆದುಕೊಂಡ ನಿರ್ಧಾವರನ್ನು ಈಗಲೂ ಪ್ರಶ್ನಿಸುತ್ತಲೇ ಇದ್ದಾರೆ. ಇದು ವಿಪರ್ಯಾಸವೇ ಸರಿ.
ಇನ್ನಾದರೂ ಸರ್ಕಾರ ಮತ್ತು ಅಂದಿನ ಸಿಎಂ ಯಡಿಯೂರಪ್ಪ ಮತ್ತು ಸಾರಿಗೆ ಸಚಿವರ ದಾರಿ ತಪ್ಪಿಸಿದ ಸಾರಿಗೆ ನೌಕರರ ಪರ ಎಂದು ಹೇಳಿಕೊಂಡು ನೌಕರರನ್ನು ಬೀದಿಗೆ ತರುತ್ತಿರುವ ಸಂಘಟನೆಗಳ ಮುಖಂಡರ ಬಗ್ಗೆ ಎಚ್ಚರ ವಹಿಸಿದರೆ ಮುಂದಿನ ದಿನಗಳಲ್ಲಿ ನೌಕರರಿಗೆ ಒಳ್ಳೆ ಕಾಲ ಬರುತ್ತದೆ ಎಂಬುದನ್ನು ಸ್ವತಃ ಮಾಜಿ ಸಾರಿಗೆ ಸಚಿವರೇ ಪರೋಕ್ಷವಾಗಿ ಹೇಳಿದ್ದಾರೆ ಅದನ್ನು ಅರಿತುಕೊಳ್ಳುವುದು ನೌಕರರಿಗೆ ಬಿಟ್ಟಿದ್ದು.