ಬೆಂಗಳೂರು: ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ಪರವಾಗಿ ಬೃಹತ್ ರೋಡ್ ಶೋ ನಡೆಸಿದರು.
ಸೋಮವಾರ (ಇಂದು) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಕೀರ್ತನ್ ಕುಮಾರ್ ಅವರ ಜತೆ ಬೃಹತ್ ರೋಡ್ ಶೋ ನಡೆಸಿದ್ದು, ದಾಸರಹಳ್ಳಿ ಬಳಿಯ ಹೆಗ್ಗೇನಹಳ್ಳಿಯ ಇಂದಿರಾ ಕ್ಯಾಂಟೀನ್ ನಿಂದ ಪೀಣ್ಯ 2ನೇ ಹಂತದ ಬಸ್ ನಿಲ್ದಾಣ, ರಾಜಗೋಪಾಲ ನಗರ ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ದುಗುಲಮ್ಮ ದೇವಸ್ಥಾನದವರೆಗೆ ಬೃಹತ್ ರೋಡ್ ಶೋ ಮೂಲಕ ಮತ ಯಾಚಿಸಿದರು.
ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಡಬಲ್ ಇಂಜಿನ್ ಸರ್ಕಾರವಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕಿಂತ ಭ್ರಷ್ಟಾಚಾರ ಡಬಲ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹೊಂದಾಣಿಕೆ ರಾಜಕಾರಣವಿದೆ.
ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿಲ್ಲ ಹೊಸ ಇಂಜಿನ್ ‘ಕೇಜ್ರಿವಾಲ್ ಮಾದರಿ’ ಸರ್ಕಾರ ಬೇಕಾಗಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್‌ನಲ್ಲಿ ರಾಜಕೀಯ ಸ್ವಚ್ಛತೆಯನ್ನ ಮಾಡಲಾಗಿದೆ ಈಗ ಕರ್ನಾಟಕದಲ್ಲಿ ಸ್ವಚ್ಛತೆ ಮಾಡಬೇಕು ಎಂದು ಭಗವಂತ್ ಮಾನ್ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಆಮ್ ಆದ್ಮಿ ಪಾರ್ಟಿಯ ರಾಜ್ಯಾದ್ಯಕ್ಷ ಪೃಥ್ವಿ ರೆಡ್ಡಿ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು, ಸಾವಿರಾರು ಆಪ್ ಬೆಂಬಲಿಗರು ಭಾಗವಹಿಸಿದ್ದಾರೆ.