NEWSನಮ್ಮಜಿಲ್ಲೆ

“ದಾವಣಗೆರೆ” ಮೂವರು ಸೋಂಕಿತರ ಪ್ರಾಥಮಿಕ ವರದಿ ನೆಗೆಟಿವ್

ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ l ಎಸ್.ಆರ್.ಉಮಾಶಂಕರ್

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಲಭ್ಯತೆ ಸೇರಿದಂತೆ ಜನಜೀವನ ಸುಗಮವಾಗಿ ನಡೆಯಲು ಆರಂಭದಿಂದಲೂ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಬಾರದಿರಲಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಆಶಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಕೋವಿಡ್ 19 ವೈರಾಣು ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಹಿಂದೆ ಆರ್‍ಓ ಪ್ಲಾಂಟ್ ಬಂದಾಗಿನಿಂದ ವೈದ್ಯರಿಗೆ ಕೆಲಸ ಕಡಿಮೆಯಾಗಿತ್ತು. ಇದೇ ರೀತಿ ಕೋವಿಡ್ ನಿಯಂತ್ರಣ ಯಶಸ್ವಿಯಾದಲ್ಲಿ ಜಿಲ್ಲೆಯ ವೈದ್ಯರ ಮೇಲಿನ ಒತ್ತಡ ಕಡಿಮೆಯಾಗಿ, ಅವರ ಸೇವೆಯನ್ನು ಇತರೆ ಜಿಲ್ಲೆಗಳಲ್ಲಿ ಬಳಸಿಕೊಳ್ಳಬಹುದೆಂದರು.

ಪ್ರಸ್ತುತ ಜಿಲ್ಲೆಯಲ್ಲಿರುವ 3 ಪಾಸಿಟಿವ್ ಪ್ರಕರಣಗಳ ಸೋಂಕಿತರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಚಿಕಿತ್ಸಾ ಅವಧಿಯಲ್ಲಿಯಲ್ಲಿನ ಪ್ರಾಥಮಿಕ ಹಂತದ ಗಂಟಲು ಮಾದರಿ ಪರೀಕ್ಷೆಯಲ್ಲಿ ಈ ಮೂವರು ಸೋಂಕಿತರ ಫಲಿತಾಂಶ ನೆಗೆಟಿವ್ ಎಂದು ಬಂದಿರುವುದು ಸಂತಸದ ವಿಷಯವಾಗಿದ್ದು ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ವರದಿಯಾಗುವುದು ಬೇಡವೆಂದು ಹೇಳಿದರು.

ಡಿಎಸ್ಇನ್ಫೆಕ್ಷನ್ ಕಾರ್ಯ ಉತ್ತಮ

ಜಿಲ್ಲೆಯಲ್ಲಿ ಎಪಿಸೆಂಟರ್, ಬಫರ್ ವಲಯಗಳಲ್ಲಿ ಡಿಎಸ್‍ಇನ್ಫೆಕ್ಷನ್ ಕಾರ್ಯ ಉತ್ತಮವಾಗಿ ಕೈಗೊಳ್ಳಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕು. ಎಲ್ಲ ಅಗತ್ಯ ಸಾಮಗ್ರಿಗಳ ಜೊತೆಗೆ ಮಾನವ ಸಂಪನ್ಮೂಲವನ್ನು ಸಿದ್ದವಿರಿಸಿಕೊಳ್ಳಬೇಕು. ಹಾಗೂ ಕೋವಿಡ್ ಸ್ಕ್ರೀನಿಂಗ್‍ಗೆ ಆಯುಷ್ ವೈದ್ಯರಿಗೆ ತರಬೇತಿ ನೀಡಿ ಬಳಸಿಕೊಳ್ಳಬಹುದು ಎಂದರು.

ಮನೆಗಳಿಗೆ ತೆರಳಿ ಫ್ಲೂ ಟೆಸ್ಟ್

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಎಪಿಸೆಂಟರ್ ವಲಯದಲ್ಲಿರುವ ಮನೆಗಳಿಗೆ ತೆರಳಿ ಫ್ಲೂ ಟೆಸ್ಟ್ ಮಾಡಲಾಗಿದೆ. ಈ ವಲಯಗಳಲ್ಲಿ ಡಿಸ್‍ಇನ್ಫೆಕ್ಷನ್ ಸೇರಿದಂತೆ ಪ್ರೊಟೊಕಾಲ್ ಪ್ರಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕೆಲಸ ಮಾಡಲಾಗುತ್ತಿದ್ದು ಆರ್‍ಆರ್‍ಟಿ ತಂಡ ಪ್ರತಿದಿನ ಕೋವಿಡ್ ಸರ್ವೆ ಕಾರ್ಯದಲ್ಲಿ ತೊಡಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್ ಮಾತನಾಡಿ ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಪ್ರಸ್ತುತ 70 ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೊಳಿಪಡುವಷ್ಟು ಎಲ್ಲ ರೀತಿಯ ವೈದ್ಯಕೀಯ, ಸಾಮಗ್ರಿಗಳು, ಮಾನವ ಸಂಪನ್ಮೂಲವನ್ನು ಸಿದ್ದವಿಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿದಿನ ಪ್ರಗತಿ ಪರಿಶೀಲನೆ ಸಭೆ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೊರೊನಾ ನಿಯಂತ್ರಣ ಹಿನ್ನೆಲೆ ಪ್ರತಿದಿನ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಕಚೇರಿಯಲ್ಲಿ ವಾರ್ ರೂಂ ಸ್ಥಾಪಿಸಲಾಗಿದೆ. ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ರೈಸ್ ಮಿಲ್, ದಾಲ್ ಮಿಲ್ ಮಾಲೀಕರೊಂದಿಗೆ ಸಭೆ ನಡೆಸಲಾಗಿದ್ದು, ಪ್ರಸ್ತುತ 62 ರೈಸ್‍ಮಿಲ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಟ್ರಾಫಿಕ್ ಸೇರಿದಂತೆ ವೈದ್ಯಕೀಯ ಇತರೆ ವಸ್ತುಗಳ ವ್ಯವಸ್ಥೆ ಮಾಡಲು ಪ್ರಮೋದ್ ನಾಯಕ್ ನೋಡಲ್ ಅಧಿಕಾರಿಯನ್ನು ನೇಮಿಸಿ ಕ್ರಮ ಕೈಗೊಳ್ಳಲಾಗಿದೆ. ಅಲೆಮಾರಿ, ವಲಸೆ ಕಾರ್ಮಿಕರಿಗೆ ಊಟ ಮತ್ತು ಹಾಲು ವಿತರಿಸಲಾಗುತ್ತಿದೆ. 23235 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.

300 ವಾಹನಗಳು ಸೀಜ್
ಎಸ್‍ಪಿ ಹನುಮಂತರಾಯ ಮಾತನಾಡಿ ಅನಗತ್ಯವಾಗಿ ಓಡಾಡುತ್ತಿದ್ದವರ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ 300 ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದರು.

ಔಷಧಗಳನ್ನು ಸಾಗಿಸುತ್ತಿದ್ದ ವಿಆರ್‍ಎಲ್ ಲಾಜಿಸ್ಟಿಕ್ ಬಂದ್ ಆಗಿರುವ ಕಾರಣ ತೊಂದರೆಯಾಗಿದೆ ಎಂದು ಡಿಸಿ ತಿಳಿಸಿದಾಗ, ಉಸ್ತುವಾರಿ ಕಾರ್ಯದರ್ಶಿಗಳು ಈ ಕುರಿತು ಸಾರಿಗೆ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಆದಷ್ಟು ಹತ್ತಿರದ ಪ್ರದೇಶಗಳಿಂದ ಔಷಧ ತರಿಸಿಕೊಳ್ಳಿರಿ ಎಂದರು.

ಡಿಸಿ ಪೂಜಾರ್ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

error: Content is protected !!