ಬೆಂಗಳೂರು: ಇಂದು ಗಾನ ಗಂಧರ್ವ, ಪದ್ಮ ಭೂಷಣ, ನಟಸಾರ್ವಭೌಮ ವರನಟ ಡಾ.ರಾಜ್ ಕುಮಾರ್ ಅವರ 94ನೇ ಜನ್ಮದಿನವನ್ನು ನಾಡಿನಾದ್ಯಂತ ಅಭಿಮಾನಿಗಳು ಹಲವು ವೈಶಿಷ್ಟ್ಯಗಳೊಂದಿಗೆ ಆಚರಿಸುತ್ತಿದ್ದಾರೆ.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಮುತ್ತುರಾಜ್ ಜನಿಸಿದರು. ಭಾರತೀಯ ಚಿತ್ರರಂಗದ ಮೇರುನಟನಾಗಿ ಬೆಳೆದ ಡಾ. ರಾಜ್ ಕನ್ನಡ ಚಿತ್ರರಂಗ ಮಾತ್ರವಲ್ಲ, ನಾಡು ನುಡಿಗಾಗಿ ಸಲ್ಲಿಸಿರುವ ಕೊಡುಗೆ ಅಪಾರ. ಅವರ ವ್ಯಕ್ತಿತ್ವ, ಅವರ ಸಾಧನೆಗಳೆಲ್ಲವೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಚಿರಸ್ಥಾಯಿಯಾಗಿದೆ.
ಡಾ.ರಾಜ್ ಗೊತ್ತಿಲ್ಲದ ಕನ್ನಡಿಗರು ಬಹುಶಃ ಇರಲಿಕ್ಕಿಲ್ಲ. ಕನ್ನಡ ಸಿನಿಮಾರಂಗದ ಧ್ರುವರತ್ನವಾಗಿ ಬೆಳಗಿದ ಡಾ.ರಾಜ್ ಬೆಳೆದದ್ದು ಈಗ ಇತಿಹಾಸ. ಇಂದು ಅವರ 94 ಹುಟ್ಟಿದ ದಿನ. ಸಹಜವಾಗಿ ಕನ್ನಡಿಗರು ಅವರನ್ನು ಸ್ಮರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಇಂದು ಅವರ ಮಕ್ಕಳು, ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.
ಜತೆಗೆ ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಕೆಲ ಅಭಿಮಾನಿಗಳು ಇದ್ದೂರಿನಲ್ಲೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ನೆರೆದಿದ್ದು, ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.
ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪಕ್ಕದಲ್ಲೇ ಇರುವ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿದ್ದಾರೆ. ಅಣ್ಣಾವ್ರ ಅಭಿಮಾನಿಗಳ ಜೊತೆ ಕುಟುಂಬದ ಸದಸ್ಯರು ಕೆಲಹೊತ್ತು ಇದ್ದು ಅಭಿಮಾನಿಗಳ ಅಭಿಮಾನವನ್ನು ಕಣ್ತುಂಬಿಕೊಂಡರು.