ನ್ಯೂಡೆಲ್ಲಿ: ದೇಶದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಪ್ರಯತ್ನ ಯಶಸ್ವಿಯಾಗದು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಂಗ ನೇಮಕಾತಿ ಸಂಬಂಧ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಎನ್ಡಿಟಿವಿ ಜತೆ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ನ್ಯಾಯವ್ಯವಸ್ಥೆಯನ್ನು ಟೀಕಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ತರಾಟೆಗೆ ತೆಗೆದುಕೊಂಡ ಅವರು, “ಇದು ಅಪ್ರಚೋದಿತ ಮತ್ತು ಆಘಾತಕಾರಿ” ಎಂದು ಬಣ್ಣಿಸಿದರು. ಯಾವುದೇ ಶಾಸನ ಅಥವಾ ಸಂವಿಧಾನ ತಿದ್ದುಪಡಿ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಂಗ ಸ್ವಾತಂತ್ರ್ಯ ಸಂವಿಧಾನದ ಮೂಲ ಸಂರಚನೆಯ ಭಾಗ. ಪ್ರಜಾಪ್ರಭುತ್ವಕ್ಕೆ ಸ್ವಾತಂತ್ರ್ಯ ನ್ಯಾಯಾಂಗವೇ ಅಡಿಪಾಯ. ಆದ್ದರಿಂದ ಯಾವುದೇ ವಿಧದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆದರೆ, ಅದು ಪ್ರಜಾಪ್ರಭುತ್ವದ ಮೇಲೆ ನಡೆಯುವ ಹಲ್ಲೆ ಎನಿಸುತ್ತದೆ ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದರು.
ಇದಕ್ಕೂ ಮುನ್ನ ಎನ್ಡಿಟಿವಿ ನಡೆಸಿದ ಸಂದರ್ಶನದಲ್ಲಿ ಹಿರಿಯ ವಕೀಲ ಕಪಿಲ್ ಸಿಬಾಲ್ ಅವರು, ದೇಶದ ನ್ಯಾಯಾಂಗ ಸ್ವಾತಂತ್ರ್ಯ, ಅವರು ವಶಪಡಿಸಿಕೊಳ್ಳಬೇಕಾದ ಕೊನೆಯ ಕೋಟೆ. ಚುನಾವಣಾ ಆಯೋಗದಿಂದ ಹಿಡಿದು ರಾಜ್ಯಪಾಲರು, ವಿವಿಗಳ ಕುಲಪತಿಗಳು, ಕಾನೂನು ಜಾರಿ ನಿರ್ದೇಶನಾಲಯ, ಸಿಬಿಐ, ಎನ್ಐಎ ಹಾಗೂ ಮಾಧ್ಯಮವೂ ಸೇರಿದಂತೆ ಇತರ ಎಲ್ಲ ಸಂಸ್ಥೆಗಳನ್ನು ಅವರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)