ನ್ಯೂಡೆಲ್ಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದು ಅದನ್ನೂ ಖಂಡಿಸಿ ತಮ್ಮ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ದೇಶದ ರೈತರು ಹಾಗೂ ಸಾರ್ವಜನಿಕರಿಗೆ ಕಾಮನ್ವೆಲ್ತ್ ಕ್ರಿಡಾಕೂಟದ ಚಿನ್ನದ ಪದಕ ವಿಜೇತ ಬಜರಂಗ್ ಪುನಿಯಾ ವಿನಂತಿ ಮಾಡಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದನೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ಒಬ್ಬ ಅಪ್ರಾಪ್ತ ಸೇರಿದಂತೆ ಏಳು ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಅವರನ್ನು ಬಂಧಿಸುವಂತೆ ಕುಸ್ತಿಪಟುಗಳು ಏಪ್ರಿಲ್ 23ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಜಂತರ್ ಮಂತರ್ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳು ರಾತ್ರಿ ಮಲಗಲು ಹಾಸಿಗೆಗಳನ್ನು ತರುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಆಗ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ಮಹಿಳಾ ಕುಸ್ತಿಪಟುಗಳನ್ನು ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ಬಜರಂಗ್ ಪೊನಿಯಾ ಮಾತನಾಡಿ, ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಮೀನಾಮೇಷ ಎಣಿಸುತ್ತಿದ್ದ ಇದರ ವಿರುದ್ಧ ಧ್ವನಿಯಾಗಲು ರೈತರು ಮತ್ತು ಸಾರ್ವಜನಿಕರು ಜಂತರ್ ಮಂತರ್ಗೆ ಬಂದು ತಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಇದು ಸರಿಯಾದ ಸಮಯ, ಈಗಲ್ಲದಿದ್ದರೆ, ನಂತರ ಯಾವಾಗ ಒಟ್ಟಾಗೋದು? ಇದು ನಮ್ಮ ಹೆಣ್ಣುಮಕ್ಕಳ ಘನತೆಯ ಪ್ರಶ್ನೆಯಾಗಿದೆ. ಬ್ರಿಜ್ ಭೂಷಣ್ ನಂತಹ ಜನರು ಅಪರಾಧಿಯಾಗಿದ್ದರೂ, ಅವರು ಸ್ವತಂತ್ರವಾಗಿ ಸಾರ್ವಜನಿಕರ ಮಧ್ಯೆ ಕಾಣಿಸುತ್ತಿದ್ದಾರೆ. ಆದರೆ ನಮಗೆ ಈ ಶಿಕ್ಷೆ ನೀಡುತ್ತಿದ್ದಾರೆ ಎಂದು ಬಜರಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಆ ಘಟನೆ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಕೇಳಿದಾಗ, ಸಿಸಿಟಿವಿ ಕ್ಯಾಮೆರಾಗಳು ಇಲ್ಲಿ ಇವೆ, ಅದರ ದೃಶ್ಯಾವಳಿಗಳು ಸ್ಪಷ್ಟಪಡಿಸುತ್ತವೆ ಎಂದು ಬಜರಂಗ್ ಹೇಳಿದರು.
ದೆಹಲಿ ಪೊಲೀಸರು ಹೇಳುವಂತೆ ಎಎಪಿ ನಾಯಕ ಸೋಮನಾಥ್ ಅವರು ಹಾಸಿಗೆಗಳನ್ನು ತಂದಿದ್ದಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ನೀವು ಸಿಸಿಟಿವಿ ದೃಶ್ಯಾವಳಿಗಳನ್ನೇ ನೋಡಿ, ಆ ಘಟನೆ ನಡೆದಾಗ ಅವರು ಇರಲಿಲ್ಲ ಎಂಬುದು ನಿಮಗೆ ತಿಳಿಯಲಿದೆ. ನಾವೇ ಹಾಸಿಗೆಗಳನ್ನು ತಂದಿರೋದು, ಅವುಗಳನ್ನು ಒಳಗೆ ತರುತ್ತಿದ್ದೆವು ಎಂದು ತಿಳಿಸಿದರು.
ಈ ವೇಳೆ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತರು ವಿನೇಶ್ ಫೋಗಟ್ ಮಾತನಾಡಿ, ”ಮಹಿಳಾ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಪುರುಷ ಅಧಿಕಾರಿಗಳು ನಮ್ಮನ್ನು ಹೇಗೆ ತಳ್ಳುತ್ತಾರೆ. ನಾವು ಅಪರಾಧಿಗಳಲ್ಲ, ಅಂತಹ ವರ್ತನೆ ತೋರಲು ನಾವು ಇಲ್ಲಿ ಬಂದಿಲ್ಲ. ಕುಡಿದು ಬಂದ ಪೊಲೀಸ್ ಅಧಿಕಾರಿ ನನ್ನ ಸಹೋದರನಿಗೆ ಹೊಡೆದರು ಎಂದು ಹೇಳಿದರು.
ನಿಜಕ್ಕೂ ಪೊಲೀಸರ ವರ್ತನೆಯಿಂದ ನಮಗೆ ಆಘಾತವಾಗಿದೆ. ಏಕೆಂದರೆ ನಾವು ಅಪರಾಧಿಗಳಲ್ಲ ಆದರೂ ಶಿಕ್ಷಿಸಬೇಕಾದವರನ್ನು ರಕ್ಷಿಸುತ್ತ ನಮ್ಮ ಮೇಳೆ ದೌರ್ಜನ್ಯ ಎಸಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ನೀವು ನಮ್ಮನ್ನು ಕೊಲ್ಲಬೇಕೆಂದುಕೊಂಡಿದ್ದರೆ ಮೊದಲು ಆ ಕೆಲಸ ಮಾಡಿಬಿಡಿ ಎಂದು ಅಳುತ್ತಾ ವಿನೇಶ್ ಫೋಗಟ್ ತಡರಾತ್ರಿ ಮಾಧ್ಯಮದವರಿಗೆ ಹೇಳಿದರು.
ನಾವು ಈ ದಿನ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ? ನಾವು ಸರಿಯಾದ ಸಮಯಕ್ಕೆ ಊಟ ನಿದ್ರೆ ಎಲ್ಲವನ್ನು ಬಿಟ್ಟು ದೇಶಕ್ಕಾಗಿ ಪದಕ ತಂದುಕೊಟ್ಟಿದ್ದೇವೆ. ಆದರೆ ನಮ್ಮ ಮೇಲೆಯೇ ಈ ರೀತಿ ದೌರ್ಜನ್ಯ ಎಸಗುತ್ತಿರುವುದು ದೇಶಕ್ಕೆ ಮಾಡುತ್ತಿರುವ ಅಪಮಾನ ಎಂದ ಅವರು, ಪ್ರತಿಯೊಬ್ಬ ಪುರುಷನಿಗೆ ಮಹಿಳೆಯರನ್ನು ನಿಂದಿಸುವ ಹಕ್ಕು ಇದೆಯೇ? ಈ ಪೊಲೀಸರು ಬಂದೂಕು ಹಿಡಿದಿದ್ದಾರೆ, ಅವರು ನಮ್ಮನ್ನು ಯಾವಾಗ ಬೇಕಾದರೂ ಕೊಲ್ಲಬಹುದು” ಎಂದು ಕಣ್ಣೀರಿಟ್ಟರು.