ಪಿರಿಯಾಪಟ್ಟಣ: ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಉತ್ತರವಾದಾಗ ಮಾತ್ರ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.
ತಾಲೂಕಿನ ಮಾಕೋಡು ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳು ಸಮಾಧಾನ ಚಿತ್ತದಿಂದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಈ ಬಾರಿ ತಾಲೂಕಿನಲ್ಲಿ ಅತಿಯಾದ ಮಳೆಯಿಂದ 1200 ಮನೆಗಳು ಹಾನಿಯಾಗಿವೆ ಎಂದು ಪರಿಹಾರಕ್ಕಾಗಿ ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಅಧಿಕಾರಿಗಳು ಲೋಪ ಮಾಡಿ ಬೋಗಸ್ ಅರ್ಜಿಯನ್ನು ನೀಡಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಪುನರ್ ಪರಿಶೀಲನೆ ಮಾಡುವಂತೆ ಆದೇಶಿಸಿ ಪರಿಹಾರವನ್ನು ತಡೆ ಹಿಡಿಯಲಾಗಿದೆ.
ಹೀಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮತ್ತೊಮ್ಮೆ ನೈಜ ಫಲಾನುಭವಿಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಈ ದಿನ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ 125 ಅರ್ಜಿಗಳು ಬಂದಿದ್ದು, ಅರ್ಜಿಗಳನ್ನು ಪರಿಶೀಲಿಸಿ ನನ್ನ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಸುತ್ತೇನೆ.
ಗ್ರಾಮಗಳಲ್ಲಿ ಸರ್ವೆ ಪಹಣಿ ಲೋಪ, ಮೋಜಣಿ, ಬರ, ಪ್ರವಾಹ ಪರಿಸ್ಥಿತಿ, ಪರಿಹಾರ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸ ಬಯಸುವವರು ತಹದೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದು ಎಂದರು.
ಶಾಸಕ ಮಹದೇವ್ ಮಾತನಾಡಿ ತಾಲೂಕಿನಲ್ಲಿ ಇದು 13 ನೇ ಕಾರ್ಯಕ್ರಮ, ಇಲ್ಲಿಯ ವರೆಗೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ 2 ಸಾವಿರ ಅರ್ಜಿಗಳು ಬಂದಿದ್ದು ಅವುಗಳಲ್ಲಿ ಕೆಲವು ತೀಕ್ಷ್ಣ ಸಮಸ್ಯೆಗಳು ಎಂದು ಕಂಡು ಬಂದಾಗ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಅಲ್ಲದೆ ವಿವಿಧ ಯೋಜನೆಗಳ ಅಡಿಯಲ್ಲಿ 3 ಸಾವಿರ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ರಸ್ತೆ ಅಭಿವೃದ್ಧಿ, ಜಮೀನಿನ ಸರ್ವೆ, ದೇವಸ್ಥಾನಗಳ ಜೀರ್ಣೋದ್ಧಾರ, ವಿದ್ಯುತ್ ಸಮಸ್ಯೆ, ಗ್ರಂಥಾಲಯ, ಕೆರೆ ಒತ್ತುವರಿ ತೆರವು, ಸರ್ಕಾರಿ ಜಾಗದ ಒತ್ತುವರಿ, ವಿಕಲ ಚೇತನರಿಗೆ ಸೌಲಭ್ಯ ಕಲ್ಪಿಸುವಂತೆ ಅರ್ಜಿ, ಚಿಕಿತ್ಸಾ ವೆಚ್ಚವನ್ನು ಭರಿಸಲು ಮನವಿ, ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ, ಜಮೀನಿನ ಪೋಡು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಯರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಜಿಂದಾಲ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರೇಮಾ ಕುಮಾರ್, ಕೃಷಿ ಇಲಾಖೆ ಜೆಂಟಿ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರುದ್ರೇಶ್, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮುನಿರಾಜ್ , ಗ್ರಾಪಂ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಹೇಮಾ, ತಹಸೀಲ್ದಾರ್ ಚಂದ್ರಮೌಳಿ, ತಾಪಂ ಇಒ ಕೃಷ್ಣ ಕುಮಾರ್, ಡಿಎಚ್ಒ ಡಾ.ಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)