ನ್ಯೂಡೆಲ್ಲಿ: ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್‌ನನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಬಲಿಸಿದ್ದಾರೆ.
ದೆಗಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಇಂದು ಬೆಳಗ್ಗೆ ಭೇಟಿ ಮಾಡಿದ ಅವರು, ಧರಣಿಯನ್ನು ಬೆಂಬಲಿಸುವುದಾಗಿ ಹೇಳಿದರು. ಜತೆಗೆ ಹೋರಾಟದ ನೇತೃತ್ವ ವಹಿಸಿರುವ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬಿದರು.
ಬಿಜೆಪಿ ಸಂಸದ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಭಾರತದ ಮಾಜಿ ಕ್ರಿಕೆಟ್ ತಾರೆ ಕಪಿಲ್ ದೇವ್ ಸಹ ಬೆಂಬಲ ಘೋಷಿಸಿದ್ದಾರೆ. ಈ ನಡುವೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಜೆಪಿ ಸಂಸದನ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲಿಸಿರುವ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರವೂ ಕುಸ್ತಿಪಟುಗಳು ತಕ್ಷಣಕ್ಕೆ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‍ನ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ. ಈ ಹೋರಾಟ ಕೇವಲ ಎಫ್‌ಐಆರ್‌ಗಾಗಿ ಅಲ್ಲ. ದೌರ್ಜನ್ಯ ಎಸಗಿರುವವರನ್ನು ಶಿಕ್ಷಿಸಲು. ಜೈಲಿನಲ್ಲಿ ತಾವು ಮಾಡಿದ ಕರ್ಮವನ್ನು ಅರಿಯಬೇಕು. ಅಲ್ಲದೆ ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಕುಸ್ತಿಪಟುಗಳು ಆಗ್ರಹಿಸಿದ್ದಾರೆ.