ಕೃಷ್ಣರಾಜಪೇಟೆ: ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಭೂಮಿ ಖರೀದಿಸಿ ಲೇಔಟ್ ನಿರ್ಮಾಣ ಮಾಡಲಾಗುವುದು ಎಂದು ಡಾ.ಬಸ್ತಿ ರಂಗಪ್ಪ ತಿಳಿಸಿದ್ದಾರೆ.
ಪಟ್ಟಣದ ದಲಿತ ಶಿಕ್ಷಣ ಅಭಿವೃದ್ದಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣರಾಜಪೇಟೆ ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ 202324ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿಯೇ ತಮ್ಮ ಉಳಿತಾಯ ಖಾತೆಗಳನ್ನು ತೆರೆದು ವ್ಯವಹರಿಸುವ ಜತೆಗೆ ಷೇರುದಾರರಾಗಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಇಂದಿನ ದಿನಮಾನದಲ್ಲಿ ಎಲ್ಲರೂ ಒಂದು ಸ್ವಂತ ಸೂರನ್ನು ಹೊಂದಬೇಕು ಎನ್ನುವುದು ನಮ್ಮ ಜೀವಿತದ ಜೀವಮಾನದ ಕೊನೆಯ ಆಸೆಯಾಗಿದೆ. ಈ ಕನಸನ್ನು ಸಾಕಾರ ಮಾಡುವ ದಿಕ್ಕಿನಲ್ಲಿ ದೃಢವಾದ ಹೆಜ್ಜೆ ಹಾಕಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಗೃಹ ನಿರ್ಮಾಣ ಸಹಕಾರ ಸಂಘವು ಕೃಷ್ಣರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಒಂದೂವರೆ ಎಕರೆ ಕೃಷಿ ಜಮೀನನ್ನು ಖರೀದಿಸಿ ಭೂ ಪರಿವರ್ತನೆ ಮಾಡಲಾಗುವುದು.
ಇನ್ನು ಲೇಔಟ್ ನಿರ್ಮಾಣ ಮಾಡಿ ನಿವೇಶನಗಳನ್ನಾಗಿ ವಿಂಗಡಿಸಿ, ಮಧ್ಯಮ ವರ್ಗದ ಜನರು ಹಾಗೂ ಶ್ರೀಸಾಮಾನ್ಯರ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ವಿತರಣೆ ಮಾಡಲು ನಮ್ಮ ಆಡಳಿತ ಮಂಡಳಿಯು ದೃಢವಾದ ತೀರ್ಮಾನವನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ ಎಂದರು.
ಕಾರ್ಯನಿರ್ವಾಹಕ ಮಂಡಳಿಯ ಕಾರ್ಯದರ್ಶಿ ಚೆಲುವಯ್ಯ ಅವರು ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಓದಿ ರೆಕಾರ್ಡ್ ಮಾಡಿ ಸಂಘದ ಜಮಾ ಖರ್ಚು, ಲಾಭ ನಷ್ಟ, ಆಸ್ತಿ ಜವಾಬ್ದಾರಿ ತಕ್ತೆಗಳು ಹಾಗೂ ಆಡಿಟ್ ವರದಿ ಹಾಗೂ 2024-25 ನೇ ಸಾಲಿನ ಅಂದಾಜು ಬಜೆಟ್ ಅನ್ನು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.
ಉಪಾಧ್ಯಕ್ಷ ಎಚ್.ಪುಟ್ಟರಾಜು ನಿರ್ದೇಶಕರಾದ ಕೆ. ನಂಜಪ್ಪ, ಎಚ್.ಕೃಷ್ಣ ರಾಮದಾಸ್, ಪರಶಿವಮೂರ್ತಿ ಎ.ಎಸ್.ಜಯಣ್ಣ, ಸಿಂದಘಟ್ಟ ಪುಟ್ಟರಾಜು, ಎಸ್.ಶಿವರಾಮು ಮರಿಯಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಸೋಮ ಸುಂದರ್, ಬಲರಾಮ, ಲೋಕೇಶ್ವರಿ ಸರಸ್ವತಮ್ಮ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ
![](https://vijayapatha.in/wp-content/uploads/2024/02/QR-Code-VP-1-1-300x62.png)