ಬೆಳಗಾವಿ: ಸುವರ್ಣ ಸೌಧದ ಮುಂದೆ ಕಳೆದ 8 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾರಿಗೆ ನೌಕರರ ಕೆಲ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಇಂದು ನೀಡಿದ್ದಾರೆ.
ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿರುವ ಚಂದ್ರಶೇಖರ್ ಅವರನ್ನು ಇಂದು ಸಂಜೆ ಸುವರ್ಣಸೌಧಕ್ಕೆ ಕರೆಸಿಕೊಂಡ ಸಾರಿಗೆ ಸಚಿವರು, ಯಾವುದೇ ಷರತ್ತುಗಳಿಲ್ಲದೆ ವಜಾಗೊಳಿಸಿರುವ ನೌಕರರನ್ನು ತೆಗೆದುಕೊಳ್ಳುವ ಸಂಬಂಧ ನಮಗೆ ಎರಡು ದಿನ ಕಾಲಾವಕಾಶ ಕೊಡಿ ಒಂದು ಸುತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
![](https://vijayapatha.in/wp-content/uploads/2022/12/26-Dec-ksrtc-satyagraha-6-300x169.jpg)
ಮತ್ತೊಂದು ಪ್ರಮುಖವಾಗಿ ವೇತನ ಸಂಬಂಧದ ಚರ್ಚೆ ವೇಳೆ ನಮಗೆ ವೇತನ ಆಯೋಗ ಅಳವಡಿಸಿ ವೇತನ ನೀಡಬೇಕು ಎಂದು ನಾವು ಕೇಳುತ್ತಿಲ್ಲ ನಮಗೆ ವೇತನ ಮಾದರಿಯಲ್ಲಿ ಅಂದರೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಾದರೆ ನಮ್ಮ ಸಾರಿಗೆ ನೌಕರರಿಗೂ ಅದೇ ಸಮಾನದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗುತ್ತಿದೆ. ಅದೇ ಮಾದರಿಯಲ್ಲಿ ವೇತನವನ್ನು ವೇತನ ಆಯೋಗ ಮಾದರಿಯಲ್ಲಿ ಕೊಡಬೇಕು. ಇದರಿಂದ ನಾವು ನಾಲ್ಕು ವರ್ಷಕ್ಕೊಮ್ಮೆ ವೇತನಕ್ಕಾಗಿ ಪ್ರತಿಭಟನೆ ಮಾಡುವುದು ತಪ್ಪುತ್ತದೆ.
ಅಲ್ಲದೆ ನೌಕರರು ವಜಾ, ಪೊಲೀಸ್ ಪ್ರಕರಣ, ಅಮಾನತು ಹೀಗೆ ನಾನಾ ತೊಂದರೆಗಳನ್ನು ಅನುಭವಿಸುವುದು ತಪ್ಪುತ್ತದೆ. ಹೀಗಾಗಿ ತಾವು ನಮಗೆ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಮುಖ್ಯಮಂತ್ರಿಗಳು ಬಂದಕೂಡಲೇ ಚರ್ಚಿಸಿ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳೋಣ ನೀವು ಇಲ್ಲೇ ಇರಿ ಎಂದು ನೌಕರರಿಗೆ ಸಾರಿಗೆ ಸಚಿವರು ತಿಳಿಸಿದ್ದಾರೆ.
ಹೀಗಾಗಿ ಇಂದು ಏನು ಚರ್ಚೆ ನಡೆದಿದೆಯೋ ಆ ಬಗ್ಗೆ ಒಂದು ಸ್ಪಷ್ಟತೆ ನಾಳೆ ಸಿಗಲಿದ್ದು ಅಲ್ಲಿಯವರೆಗೂ ನಾವು ಶಾಂತಿಯುತವಾಗಿಯೇ ಸತ್ಯಾಗ್ರಹವನ್ನು ಮುಂದುವರಿಸೋಣ ಎಂದು ನೌಕರರು ಚರ್ಚೆಯಲ್ಲಿ ತೊಡಗಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)