NEWSನಮ್ಮರಾಜ್ಯ

ಮಂಡ್ಯ – ಬನ್ನೂರಿನಲ್ಲೂ ಹೆಚ್ಚಾಯಿತು ಕೊರೊನಾ ಆತಂಕ

ಮೈಸೂರು ಜಿಲ್ಲೆ ಬನ್ನೂರು ಹೋಬಳಿಗೂ ಬಂದಿದ್ದ 10 ಜನರಲ್ಲಿ ಐವರಿಗೆ ಸೋಂಕು ದೃಢ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಮತ್ತು ಮಂಡ್ಯ ಜಿಲ್ಲೆ ಮಳವಳ್ಳಿ  ಹಾಗೂ ನಾಗಮಂಗಲಕ್ಕೂ ಭೇಟಿ ನೀಡಿ ಮೈಸೂರಿಗೆ ತೆರಳಿದ್ದ ನ್ಯೂಡೆಲ್ಲಿಯ ಐವರು ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬನ್ನೂರು ಸೇರಿ ಎರಡು ತಾಲೂಕುಗಳನ್ನು ಕಂಟೈನ್ಮೆಂಟ್‌ ಏರಿಯಾ ಎಂದು ಘೋಷಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕೊರೊನಾ ಸೋಂಕಿತರು ಬನ್ನೂರು, ಮಳವಳ್ಳಿ ಮತ್ತು ನಾಗಮಂಗಲ ತಾಲೂಕಿನಲ್ಲಿ ಯಾರ‍್ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆ ಮಾಡುವ ಸಲುವಾಗಿ ಟಾಸ್ಕ್‌ಫೋರ್ಸ್‌ ಸಮಿತಿಯನ್ನು ಮೈಸೂರು ಮತ್ತು ಮಂಡ್ಯ ಜಿಲ್ಲಾಡಳಿತ ರಚನೆ ಮಾಡಿದೆ.

ಐವರಿಗೆ ಕೋರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಯಾವ ಯಾವ ಪ್ರದೇಶಗಳಲ್ಲಿ ಓಡಾಡಿದ್ದರು? ಯಾರ‍್ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಜತೆಗೆ ಸೋಂಕಿತರು ಬಳಸಿರುವ ಮೊಬೈಲ್‌ ಟವರ್‌ ಜಾಡನ್ನು ಹಿಡಿದು, ಅವರು ಎಲ್ಲೆಲ್ಲಿ ಓಡಾಡಿದ್ದರು ಎಂಬುದನ್ನು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ.

ನ್ಯೂಡೆಲ್ಲಿಯ 10 ಮಂದಿ ಮುಸ್ಲಿಂ ಧರ್ಮಗುರುಗಳು ಜನವರಿ 29ರಂದು ಮೈಸೂರಿಗೆ ಆಗಮಿಸಿದ್ದು ಅಲ್ಲಿಂದ ಮಾರ್ಚ್ 13ರಂದು ನಾಗಮಂಗಲಕ್ಕೆ ಬಂದಿದ್ದರು. ಅಲ್ಲಿಂದ ಮಾರ್ಚ್ 23ರಂದು ಮಳವಳ್ಳಿಗೆ ಆಗಮಿಸಿ 29ರಂದು ಬನ್ನೂರು ಮಾರ್ಗವಾಗಿ ಬರುವಾ ವೇಳೆ ಬನ್ನೂರಿನ ಮಸೀದಿಯಲ್ಲಿ ನಮಾಜ್‌ ಮುಗಿಸಿ ಬಳಿಕ ಮೈಸೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇವರನ್ನು ವಶಕ್ಕೆ ಪಡೆದು, ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಮಾರ್ಚ್ 13 ರಿಂದ 29ರ ನಡುವಿನ ಅವಧಿಯಲ್ಲಿ 10 ಜನರಲ್ಲಿ ಒಬ್ಬ ಬೆಂಗಳೂರಿಗೆ ತೆರಳಿದ್ದ ಎಂಬ ಮಾಹಿತಿಯಿದೆ. ಬೆಂಗಳೂರಿಗೆ ಹೋದಾಗ ಆ ವ್ಯಕ್ತಿಗೆ ಸೋಂಕು ತಗುಲಿರಬಹುದು ಅಥವಾ ಮಳವಳ್ಳಿಯಿಂದ ಮೈಸೂರಿಗೆ ಹೋಗುವ ಮಾರ್ಗಮಧ್ಯೆ ಯಾವುದಾದರೂ ಮಸೀದಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಸೋಂಕಿಗೊಳಗಾಗಿರಬಹುದು ಎಂಬ ಅನುಮಾನಗಳು ಮೂಡಿವೆ.

ಈ ನಡುವೆ ಮಾರ್ಚ್ 13ರಂದು ಅವರು ಮೊದಲು ನಾಗಮಂಗಲಕ್ಕೆ ಭೇಟಿ ನೀಡಿದ್ದು ಅಲ್ಲಿನ ಯಾರಿಗೂ ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಆದರೆ ಮಳವಳ್ಳಿಗೆ ಆಗಮಿಸಿದ ನಂತರ ಸೋಂಕು ತಗುಲಿರಬಹುದೇ ಎಂಬ ಅನುಮಾನದ ಮೇರೆಗೆ ಪತ್ತೆ ಕಾರ್ಯ ನಡೆಯುತ್ತಿದೆ.

ಮೈಸೂರಿನಲ್ಲಿ ಅವರಿಗೆ ಸೋಂಕು ತಗುಲಿರುವುದು ಶನಿವಾರ ದೃಢವಾಗುತ್ತಿದ್ದಂತೆ ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತ್ರಿಲೋಕ ಚಂದ್ರ ಅವರು ಮಂಡ್ಯದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಉಪ ವಿಭಾಗಾಧಿಕಾರಿಗಳಾದ ಸೂರಜ್, ಶೈಲಜಾ ಇತರರು ಸಭೆಯಲ್ಲಿದ್ದರು.

ಕೆ.ಆರ್‌.ಪೇಟೆಯಲ್ಲೂ ಮಾಂಸ ಮಾರಾಟ ಬಂದ್‌
ಮಂಡ್ಯ ಜಿಲ್ಲಾದ್ಯಂತ ಬೇಕರಿಗಳು ಹಾಗೂ ಸಲೂನ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದ ಬೆನ್ನಲ್ಲೇ ಶನಿವಾರ ಸಂಜೆಯೇ ಕೆ.ಆರ್‌.ಪೇಟೆ ತಾಲೂಕಿನಲ್ಲಿ ಮುಂದಿನ ಆದೇಶದವರೆಗೆ ಬೇಕರಿ, ಕ್ಷೌರಿಕ ಶಾಪ್‌ಗಳು, ಚಿಕನ್‌, ಮಟನ್‌, ಮೀನು ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ತಹಸೀಲ್ದಾರ್‌ ಶಿವಮೂರ್ತಿ ಆದೇಶಿಸಿದ್ದಾರೆ.

ಮಳವಳ್ಳಿ ಹಾಗೂ ನಾಗಮಂಗಲದಲ್ಲಿ ವಾಸವಿದ್ದ ಕೆಲವರು ಈಗ ಬೇರೆ ಜಿಲ್ಲೆಗಳಿಗೆ ಹೋಗಿದ್ದು, ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ. ಹೀಗಾಗಿ ನಾಗಮಂಗಲ ತಾಲೂಕು ಕೆ.ಆರ್‌.ಪೇಟೆಯ ನೆರೆಯ ತಾಲೂಕು ಆಗಿರುವುದರಿಂದ ಅಲ್ಲಿನ ಸಂಪರ್ಕದಲ್ಲಿರುವ ವ್ಯಕ್ತಿಗಳು ಕೆ.ಆರ್‌.ಪೇಟೆ ತಾಲೂಕಿಗೆ ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್‌ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬನ್ನೂರಿನಲ್ಲೂ ಕೊರೊನಾ ಭೀತಿ

ಮಳವಳ್ಳಿ – ಬನ್ನೂರು ಮಾರ್ಗವಾಗಿ ಮೈಸೂರಿಗೆ ತೆರಳುವ ವೇಳೆ ಬನ್ನೂರಿನ ಮಸೀದಿಯಲ್ಲಿ ನ್ಯೂಡೆಲ್ಲಿಯ 10 ಮಂದಿ ನಮಾಜ್‌ ಮಾಡಿರುವುದರಿಂದ ಬನ್ನೂರಿನಲ್ಲೂ ಆತಂಕದ ವಾತಾವರಣ ಮನೆ ಮಾಡಿದ್ದು, ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ಮೈಕ್‌ (ಲೌಡ್‌ಸ್ಪೀಕರ್‌) ಹಾಕಿಕೊಂಡು ಗ್ರಾಮಗಳ ಪ್ರಜ್ಞಾವಂತರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸುತ್ತಮುತ್ತಲ ಗ್ರಾಮಗಳ ಜನತೆಯೂ ಈ ಬಗ್ಗೆ ಎಚ್ಚೆತ್ತುಕೊಂಡು ಆದಷ್ಟು ಮನೆಯಲ್ಲೆ ಉಳಿದುಕೊಳ್ಳುವ ಮೂಲಕ ಕೊರೊನಾದಿಂದ ದೂರ ಇರಲು ಸಹಕರಿಸಬೇಕು ಎಂದು ಜಿಲ್ಲಾಡಳಿತವು ಮನವಿ ಮಾಡಿದೆ.

Leave a Reply

error: Content is protected !!
LATEST
ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ ಸಾರಿಗೆ ನೌಕರರ ವೇತನದಲ್ಲಿ ಹಣ ಕಟ್‌ ಮಾಡಿ ಎಲ್‌ಐಸಿ ಪಾಲಿಸಿಗೆ ಪಾವತಿಸದ ಬಗ್ಗೆ ದೂರು ಕೊಟ್ಟರೆ ಅಮಾನತು: ಸಚಿವ ರಾಮಲಿಂಗ... BMTC: ಚಾಲಕ ಕಂ. ನಿರ್ವಾಹಕರು ಆಗಸ್ಟ್‌ 14ರೊಳಗೆ ಸಂಪೂರ್ಣ ನಿರ್ವಾಹಕರಾಗಿ ಬದಲಾಗಬೇಕು: ಸಿಟಿಎಂ ಆದೇಶ