ನ್ಯೂಡೆಲ್ಲಿ: ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದ್ದು, ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಕೆಆರ್‌ಪಿಪಿ ಪಕ್ಷ ಸ್ಥಾಪಿಸಿ ರಾಜ್ಯ ವಿಧಾನಸಭೆ ಚುನಾವಣೆ ಅಖಾಡಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇಳಿದಿದ್ದಾರೆ. ಈ ಮಧ್ಯೆ ಬಳ್ಳಾರಿಯಲ್ಲಿ ಪತ್ನಿ ಅರುಣಾ ಪರ ಪ್ರಚಾರ ಮಾಡುವ ಲೆಕ್ಕಚಾರದಲ್ಲಿದ್ದ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ ಬಳ್ಳಾರಿಗೆ ಪ್ರವೇಶವನ್ನು ನಿರಾಕರಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಳ್ಳಾರಿ ತೆರಳಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು. ಈ ಹಿನ್ನಲೆ ಬಳ್ಳಾರಿ ಪ್ರವೇಶಕ್ಕೆ ನೀಡಿರುವ ಅನುಮತಿಯನ್ನು ವಿಸ್ತರಿಸಬೇಕು ಎಂದು ಸುಪ್ರೀಂಗೆ ಮನವಿ ಮಾಡಿದ್ದರು.
ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ.ಆರ್. ಶಾ ನೇತೃತ್ವದ ದ್ವಿಸದಸ್ಯ ಪೀಠ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಕೋರಿದ್ದ ಅನುಮತಿ ನಿರಾಕರಿಸಿದೆ.