ರಾಜ್ಯ ಬಜೆಟ್-2023-24: ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ಕೊಟ್ಟ 600 ಭರವಸೆಗಳಲ್ಲಿ ಕನಿಷ್ಠ 50ನ್ನೂ ಪೂರೈಸಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಈ ಆರೋಪದ ನಡುವೆಯೇ ಇಂದು ಬಜೆಟ್ ಮಂಡನೆ ಮಾಡಿದ ಸಿಎಂ ಬೊಮ್ಮಾಯಿ ಅವರು, ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿರುವ ಬಜೆಟ್ ಇದಾಗಿದೆ ಎಂದು ಇಂದಿನ ಬಜೆಟ್ನಲ್ಲಿ ವ್ಯಾಖ್ಯಾನಿಸಿದರು.
ಇದಿಷ್ಟೇ ಅಲ್ಲದೆ ರೈತರಿಗೆ ಈ ಮೊದಲು ಕೊಡುತ್ತಿರುವ 3 ಲಕ್ಷ ರೂ.ಗಳ ಶೂನ್ಯ ಬಡ್ಡಿ ದರದ ಸಾಲವನ್ನು ಈಗ 5 ಲಕ್ಷಕ್ಕೆ ಏರಿಕೆ ಮಾಡಿ ಸಿಎಂ ಘೋಷಣೆ ಮಾಡಿದರು. ಇದು ಸೇರಿದಂತೆ ಬಜೆಟ್ನಲ್ಲಿ ಏನೆಲ್ಲ ಘೋಷಣೆ ಮಾಡಿದ್ದಾರೆ ಎಂಬುದರ ಪೂರ್ಣ ವಿವರವನ್ನು ವಿಜಯಪಥ ನಿಮಗಾಗಿ ಕೊಡುತ್ತಿದೆ.
ರೈತರಿಗೆ ಬಂಪರ್ ಗಿಫ್ಟ್, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಆಡಳಿತ-ವಿಪಕ್ಷಗಳ ಮಾತಿನ ಚಕಮಕಿಯ ನಡುವೆಯೇ ಬಜೆಟ್ ಓದಲು ಆರಂಭಿಸಿದ ಸಿಎಂ ಬೊಮ್ಮಾಯಿ, ಎರಡನೇ ಬಜೆಟ್ ಮಂಡಿಸುತ್ತಿದ್ದು ಬಜೆಟ್ನ ಒಟ್ಟು ಗಾತ್ರ 3,09,182 ಕೋಟಿ ರೂ.ಗಳು ಇದೆ.
ಈ ನಡುವೆ ಬಜೆಟ್ ಮಂಡನೆಗೆ ವಿಪಕ್ಷಗಳ ಅಡ್ಡಿಪಡಿಸಿದವು. ಇದನ್ನು ಮನಗಂಡು ವಿಪಕ್ಷಗಳ ನಾಯಕರನ್ನು ಸಮಾಧಾನಪಡಿಸಲು ಸ್ಪೀಕರ್ ಕಾಗೇರಿ ಹರಸಾಹಸ ಪಟ್ಟರು. ಸಿಎಂ ಅವರು ಬಜೆಟ್ ಓದಲಿ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.
ಈ ನಡುವೆ ಕಾಂಗ್ರೆಸ್ ಶಾಸಕರು ಕಿವಿಯ ಮೇಲೆ ಹೂಗಳನ್ನು ಇಟ್ಟುಕೊಂಡು ಬಂದು ರಾಜ್ಯದ ಜನರ ಕಿವಿ ಮೇಲೆ ಹೂವಿಡ್ತಿದ್ದಾರೆ ಬೊಮ್ಮಾಯಿ ಎಂದು ಕಾಲೆಳೆದು ಅದಕ್ಕೆ ಸಿದ್ದರಾಮಯ್ಯ ಕೂಡ ಸಾಥ ನೀಡಿದರು. ಇದರ ನಡುವೆಯೇ ಬಜೆಟ್ ಮಂಡಿಸಿದ ಸಿಎಂ ದೇವಸ್ಥಾನಗಳು ಮತ್ತು ಮಠಗಳ ಜೀರ್ಣೋದ್ಧಾರಕ್ಕೆ ಒಂದು ಸಾವಿರ ಕೋಟಿ ರೂ. ಘೋಷಣೆ ಮಾಡಿದರು.
ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಾಗಿ, ಕುಚಲಕ್ಕಿ ಖರೀದಿಗೆ ಕೇಂದ್ರ ಸ್ಥಾಪನೆ ಮಾಡಲಾಗುವುದು. ತೊಗರಿ, ಅಡಕೆಗೆ ರೋಗ ಬಂದಾಗ ಸರ್ಕಾರದ ಸಹಾಯ ನೀಡಲಾಗಿದೆ. ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಲಾಗಿದೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮುಂದುವರಿಯುತ್ತಿದೆ…