ಮೈಸೂರು: ಜಿಲ್ಲೆಯ 10 ಕ್ಷೇತ್ರಗಳಲ್ಲಿ ಅಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಜನರ ಆಶೀರ್ವಾದದಿಂದಾಗಿ ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಅಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ರಂಗಯ್ಯ ಹೇಳಿದರು.
ಎಎಪಿಯ ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚೆಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲಿ 209 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಜಾತಿ ಆಧಾರದಲ್ಲಿ ಟಿಕೆಟ್ ನೀಡದೆ ವಿದ್ಯಾರ್ಹತೆ, ಉದ್ಯೋಗ, ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ ಆಪ್ 49 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.
ಚಾಮರಾಜ ಕ್ಷೇತ್ರದ ಅಭ್ಯರ್ಥಿ ಮಾಳವಿಕ ಗುಬ್ಬಿವಾಣಿ ಮಾತನಾಡಿ, ಜೆಸಿಬಿ ಪಕ್ಷಗಳು ಜಾತಿ ಮತ್ತು ಹಣದ ಬಲ ಮೂಲಕ ಚುನಾವಣೆ ಎದುರಿಸುತ್ತಿವೆ. ಆದರೆ, ಆಮ್ ಆದ್ಮಿ ಪಾರ್ಟಿಯು ಭ್ರಷ್ಟಾಚಾರ ಮುಕ್ತ, ಯುವಕರಿಗೆ ಉದ್ಯೋಗ, ಕೌಟುಂಬಿಕ ಉಳಿತಾಯ, ಉತ್ತಮ ಶಿಕ್ಷಣ, ಆರೋಗ್ಯದಂತ ಮೂಲ ಸೌಕರ್ಯ, ರೈತರಿಗೆ ಸೂಕ್ತ ಬೆಂಬಲ ಬೆಲೆ ಹೀಗೆ ಹಲವಾರು ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡು ದೆಹಲಿ, ಪಂಜಾಬಿನಲ್ಲಿ ಅಧಿಕಾರಿದಲ್ಲಿರುವ ಆಮ್ ಆದ್ಮಿ ಪಾರ್ಟಿಯ ಶೀಘ್ರ ಪ್ರಗತಿಯ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಜನರ ಬಳಿ ಮತ ಕೇಳುತ್ತಿದೆ ಎಂದರು.
ನಾವು ರಾಜ್ಯ ಮಟ್ಟದ ಪ್ರಣಾಳಿಕೆ ಸಿದ್ದಪಡಿಸಿಲ್ಲ. ಪ್ರತಿ ಜಿಲ್ಲೆ, ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಬೇಡಿಕೆಗೆ ಅನುಗುಣವಾಗಿ ಪ್ರಣಾಳಿಕೆ ಮಾಡಲಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಇಂದಿಗೂ ಮೂಲ ಸೌಕರ್ಯ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳ ಪರಿಹಾರವನ್ನು ಆಮ್ ಆದ್ಮಿ ಪಾರ್ಟಿ ಸೂಚಿಸಿದ್ದು, ಜನರು ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಧರ್ಮಶ್ರೀ ಮಾತನಾಡಿ, ಕ್ಷೇತ್ರದಲ್ಲಿ ಇಂದು ಎಎಪಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿನ ಶಾಸಕರು ಐದು ಬಾರಿ ಆಯ್ಕೆಯಾದರೂ ಇಂದಿಗೂ ಮೂಲ ಸೌಕರ್ಯ ಸಿಗುತಿಲ್ಲ. ಸರ್ಕಾರಿ ಶಾಲೆ ಸಮಸ್ಯೆ ಹೇಳ ತೀರದಾಗಿದೆ. ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಇಲ್ಲ. ರಸ್ತೆಗಳು ಸಮರ್ಪವಾಗಿಲ್ಲ. ಇದರಿಂದ ಆಸ್ಪತ್ರೆಗೆ ತೆರಳುವ ಗರ್ಭಿಣಿಯರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ನಾನು ಸ್ಪರ್ಧೆ ಮಾಡಿದ್ದೇನೆ ಎಂದರು.
ಕೃಷ್ಣರಾಜ ಕ್ಷೇತ್ರದ ಎಎಪಿ ಅಭ್ಯರ್ಥಿ ಜಯಶ್ರೀ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಕಿರಣ್ ಕಲ್ಯಾಣಿ ಹಾಜರಿದ್ದರು.