ನಮ್ಮಜಿಲ್ಲೆ

ಮೇ ಯಲ್ಲಿ 207 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ಧತೆ: ಡಿಸಿ ಕೃಷ್ಣ ಬಾಜಪೇಯಿ

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ಅವಧಿ ಪೂರ್ಣಗೊಳಿಸಿದ 207 ಗ್ರಾಮ ಪಂಚಾಯಿತಿಗಳಿಗೆ ಬರುವ ಮೇಯಲ್ಲಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಜಿಲ್ಲೆಯಲ್ಲಿ  ಒಟ್ಟಾರೆ 223 ಗ್ರಾಮ ಪಂಚಾಯಿತಿಗಳಿವೆ.  ಈ ಪೈಕಿ 207 ಪಂಚಾಯಿತಿಗಳ 1045 ಕ್ಷೇತ್ರಗಳ 2932 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

2020ರ ಜೂನ್ ಮಾಹೆಯಲ್ಲಿ ಅವಧಿ ಪೂರ್ಣಗೊಳ್ಳಲಿರುವ ಜಿಲ್ಲೆಯ 16 ಗ್ರಾಮ ಪಂಚಾಯತಿಗಳಾದ ಆಲದಕಟ್ಟಿ, ತಡಸ, ಕಾಗಿನೆಲೆ, ಕೆರವಡಿ, ಅಂತರವಳ್ಳಿ, ಕುಪ್ಪೇಲೂರು, ಬಿಲ್ಲದಹಳ್ಳಿ, ಮಾಳನಾಯಕನಹಳ್ಳಿ, ಸುಣಕಲ್ಲಬಿದರಿ, ತುಮ್ಮಿನಕಟ್ಟೆ, ಜೋಯಿಸರಹರಳಹಳ್ಳಿ, ಕುಡುಪಲಿ, ಹುಲ್ಲತ್ತಿ, ಹಾವಣಗಿ, ಕೂಡಲ, ಹನುಮರಹಳ್ಳಿ ಗ್ರಾಮ ಪಂಚಾಯಿತಿಗಳ ಅವಧಿ  ವಿಳಂಬವಾಗಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ  ಈ ಗ್ರಾಮ ಪಂಚಾಯಿತಿಗಳಿಗೆ ಸದ್ಯಕ್ಕೆ ಚುನಾವಣೆ ನಡೆಯುತ್ತಿಲ್ಲ ಎಂದು ತಿಳಿಸಿದರು.

ಘೋಷಣೆ ಬಾಕಿ: ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಅದೇ ದಿನದಿಂದ ಮಧ್ಯಮಾರಾಟ ನಿಷೇಧವೂ ಜಾರಿಗೆ ಬರಲಿದೆ. ಚುನಾವಣೆ ಮುಗಿದ ನಂತರ ಅವಧಿ ಮುಗಿಯದ ಗ್ರಾಮ ಪಂಚಾಯಿತಿಗಳನ್ನೂ ಒಳಗೊಂಡಂತೆ ಎಲ್ಲ ಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಸರ್ಕಾರದ ಅಧಿಸೂಚನೆಯನ್ವಯ ಪಾಲನೆಮಾಡಲಾಗುವುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಚುನಾವಣಾ ತಹಸೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು.

Leave a Reply