ಹಾವೇರಿ: ಅತಿವೃಷ್ಟಿ ನೆರೆಯಿಂದ ಹಾನಿಯಾದ ಬೆಳೆಪರಿಹಾರ ವಿತರಣೆಯ ಅವ್ಯವಹಾರ ಕುರಿತಂತೆ ಪೊಲೀಸ್ ತನಿಖೆ ಮುಂದುವರಿದಿದ್ದು, ಈವರೆಗೆ ಅವ್ಯವಹಾರದಲ್ಲಿ ಭಾಗೀಯಾದ ಆರೋಪದ ಮೇಲೆ 11 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ನೆರೆ ಪರಿಹಾರದಲ್ಲಿ ಈವರೆಗೆ 18ರಿಂದ 20 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆದಿರುವುದು ಅಂದಾಜಿಸಲಾಗಿದೆ. ಬೆಳೆಪರಿಹಾರ ಮಾದರಿಯಲ್ಲಿ ವಸತಿ ಯೋಜನೆ ಪರಿಹಾರದಲ್ಲಿ ಲೋಪವಾಗಿದೆಯಾ ಎಂಬುದನ್ನು ಪರಿಶೀಲಿಸಲು ಪ್ರಾದೇಶಿಕ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನಾ ತಂಡ ರಚಿಸಿದ್ದಾರೆ ಎಂದು ವಿವರಿಸಿದರು.
ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ 4.38 ಎಕರೆವರೆಗೆ ಒಂದು ಖಾತೆಗೆ ಪರಿಹಾರ ಒದಗಿಸಬೇಕು. ಇದಕ್ಕಿಂತ ಹೆಚ್ಚುವ ಹಿಡುವಳಿ ಹೊಂದಿದವರ ಜಮೀನು ವಿಭಾಗೀಸಿ ಬೇರೆ ಬೇರೆ ಆಧಾರ್ ಸಂಖ್ಯೆ ಜೋಡಿಸಿ ಹಣ ಬೇರೆ ಬೇರೆಯವರಿಗೆ ಹಣ ಪಾವತಿಯಾಗಿರುವುದು ಕಂಡುಬಂದಿದೆ. ಬಹುಪಾಲು ಪ್ರಕರಣಗಳಲ್ಲಿ ಪ್ರಕೃತಿ ವಿಕೋಪ ಕಾಯ್ದೆಯಡಿ ನಿಯಮಾನುಸಾರ ಪರಿಹಾರ ವಿತರಿಸುವ ಮೊದಲು ನಮೂನೆ 1ರಲ್ಲಿ ಜಮೀನು ಪರಿಶೀಲಿಸಿ ರೈತರು ಬೆಳೆದ ಬೆಳೆಯ ಮಾಹಿತಿ, ಹಿಡುವಳಿ ಮಾಹಿತಿಯನ್ನು ನಿರ್ವಹಣೆಮಾಡಿರುವುದಿಲ್ಲ.
ಸೊನ್ನೆಯಿಂದ 1.5 ಮ್ಯಾಚ್ ಸ್ಕೋರ್ ಕಡಿಮೆ ಇರುವ 23,468 ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳಲ್ಲಿ ಪರಿಹಾರವಾಗಿ 36.49 ಕೋಟಿ ರೂ. ಹಣ ಪಾವತಿಯಾಗಿದೆ. 0 ದಿಂದ 1.5 ಮ್ಯಾಚ್ ಸ್ಕೋರ್ ಹೊಂದಿರುವ ಪ್ರಕರಣಗಳ ಪರಿಶೀಲನೆಗೆ ಹಿಂದಿರುಗಿಸಿ ಪರಿಶೀಲನೆ ನಡೆಸುವ ಅವಕಾಶವಿದ್ದರೂ ಗ್ರಾಮ ಲೆಕ್ಕಾಧಿಕಾರಿಗಳು ಯಾವುದೇ ಆಕ್ಷೇಪಣೆ ಇಲ್ಲದೆ ಪರಿಶೀಲನೆಗೂ ಹಿಂದಿರುಗಿಸದೆ ಅಪ್ರೂಲ್ ಮಾಡಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 3,71,459 ಹೆಕ್ಟೇರ್ ಬಿತ್ತನೆಯಾಗಿದೆ. ಈ ಪೈಕಿ 3,10,537 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಈವರೆಗೆ ಬೆಳೆನಷ್ಟ ಪರಿಹಾರವಾಗಿ 202,01,76,625 ರೂ. ಪಾವತಿಸಲಾಗಿದೆ. 105 ಕೋಟಿ ರೂ. ವಸತಿಗಾಗಿ ಬಿಡುಗಡೆಯಾಗಿದೆ. (ಸರ್ಕಾರದಿಂದ 95 ಕೋಟಿ ರೂ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 10 ಕೋಟಿ ರೂ.) ಮೂಲಭೂತ ಸೌಕರ್ಯಗಳಿಗಾಗಿ 35 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.