ಯಾದಗಿರಿ: ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ರೌಡಿಗಳ ರೀತಿ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದಲ್ಲ ಎಂದು ಪ್ರಜ್ಞಾವಂತ ನಾಗರಿಕರು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ನಡೆದಿರುವುದು ಸುರಪುರ ವಿಧಾನಸಭಾ ಕ್ಷೇತ್ರದ ತೋಳದಿನ್ನಿ ಗ್ರಾಮದಲ್ಲಿ ಎಂದು ತಿಳಿದು ಬಂದಿದೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಜುನಾಥ ನಾಯಕ್ ಪರ ಮತಯಾಚನೆ ಮಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಏಕಾಏಕಿ ನುಗ್ಗಿ ಗಲಾಟೆ ಆರಂಭಿಸಿದ್ದಾನೆ. ಕಟ್ಟೆಯ ಮೇಲಿದ್ದ ಎಎಪಿ ಕಾರ್ಯಕರ್ತನನ್ನು ಕೊರಳಪಟ್ಟಿ ಹಿಡಿದು ಕಟ್ಟೆಯ ಮೇಲಿನಿಂದ ಕೆಳಗೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ.
ಅಂದರೆ ಬಿಜೆಪಿ ಕೆಲ ಕಾರ್ಯಕರ್ತರಿಗೆ ತಮ್ಮ ಪಕ್ಷ ಬಿಟ್ಟು ಬೇರಾರು ಚುನಾವಣೆ ಪ್ರಚಾರ ಮಾಡಬಾರದು ಎಂಬ ಮನಸ್ಥಿತಿಯುಳ್ಳವರಾಗಿದ್ದಾರೆ ಇಂಥವರನ್ನು ಕರೆದು ವರಿಷ್ಠರು ಬುದ್ಧಿಹೇಳಬೇಕಿದೆ ಇಲ್ಲದಿದ್ದರೆ ಅಶಾಂತಿ ಉಂಟಾಗಲಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇದೇ ತಿಂಗಳ 6ರಂದು ಸುರಪುರ ವಿಧಾನಸಭಾ ಕ್ಷೇತ್ರದ ಕೊಡೇಕಲ್ ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ ಐದಾರು ಜನರಿಗೆ ಗಾಯಗಳಾಗಿತ್ತು. 15ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು. ಆ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ನಡೆದಿದೆ.