ಬೆಂಗಳೂರು: ನಾನು ಕೂಡ ಖಾಸಗಿ ಸಮೀಕ್ಷೆ ನಡೆಸಿ ಯಾವುದಾದರೊಂದು ಸುದ್ದಿ ವಾಹಿನಿಗೆ 10-20 ಕೋಟಿ ರೂಪಾಯಿ ನೀಡಿದ್ದರೆ ಚುನಾವಣಾ ಪೂರ್ವಸಮೀಕ್ಷೆಯಲ್ಲಿ ನಮ್ಮ ಪಕ್ಷಕ್ಕೆ 129 ಸ್ಥಾನ ಬರಲಿದೆ ಎಂದು ಪ್ರಚೂರ ಪಡಿಸಬಹುದಿತ್ತು ಎಂದು ಮತದಾರರ ತಪ್ಪು ದಾರಿಗೆ ಎಳೆಯುತ್ತಿರುವವರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕೇವಲ 29 ಸ್ಥಾನ ಬರಲಿದೆ ಎಂದು ತಿಳಿಸಿವೆ. ಆದರೆ, ಜನರು ಈ ಬಗ್ಗೆ ನಂಬಿ ಅಂದರೆ ಸಮೀಕ್ಷೆ ಹಿಂದೆ ಬಿದ್ದು ಈ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅಂದ ಮೇಲೆ ಇದಕ್ಕೆ ಯಾಕೆ ನಾವು ಮತಹಾಕಬೇಕು ಎಂದು ತಮ್ಮ ಮನಸ್ಸು ಬದಲಿಸಿಕೊಳ್ಳಲಿ ಎಂದು ನಡೆಸಿರುವ ಹುನ್ನಾರ ಇದಕ್ಕೆ ನಮ್ಮ ನಾಡಿನ ಪ್ರಜ್ಞಾವಂತ ಮತದಾರರು ಸೊಪ್ಪುಹಾಕಬಾರದು ಎಂದು ಮನವಿ ಮಾಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಜೆಡಿಎಸ್‌ಗೆ ಈ ಬಾರೀ 29 ಸ್ಥಾನಗಳು ಬರಲಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ಈಗ ಮತದಾರರು ಮಾಧ್ಯಮಗಳ ಹೇಳಿಕೆ ಎಷ್ಟು ಸರಿ ತಪ್ಪು ಎಂಬ ಬಗ್ಗೆ ಯೋಚಿಸುವ ಪ್ರಭುದ್ಧತೆ ಹೊಂದಿದ್ದಾರೆ. ಹೀಗಾಗಿ ಈ ಬಾರಿ ನಮಗೆ 123ಕ್ಕೂ ಹೆಚ್ಚಿನ ಸ್ಥಾನವನ್ನು ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನಾನು ಯಾವುದಾದರೂ ಖಾಸಗಿ ಸಮೀಕ್ಷೆ ನಡೆಸಿ ಯಾವುದಾದರೂ ಸುದ್ದಿ ವಾಹಿನಿಗೆ 10 ಕೋಟಿಯಿಂದ 20 ಕೋಟಿ ನೀಡಿದರೇ 29 ಸ್ಥಾನ ಇದ್ದದ್ದು, ನಾಳೆಗೆ 129 ಸ್ಥಾನ ಆಗುತ್ತದೆ. ಈ ರೀತಿಯ ಸಮೀಕ್ಷೆ ನಮಗೆ ಬೇಡ ಎಂದ ಅವರು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳನು ರಾಜ್ಯದ ಜನ ನೋಡಿದ್ದಾರೆ. ಈಗ ನಮಗೆ ಒಂದು ಅವಕಾಶ ಕೊಡಲು ಯೋಚಿಸಿದ್ದು ಈ ಬಾರಿ ನಮ್ಮ ಪಕ್ಷ ಸರ್ಕಾರ ರಚಿಸಲಿದೆ ಎಂದು ಹೇಳಿದರು.
ಜನಬಲ ಇದ್ದರೂ ನನಗೆ ಹಣದ ಕೊರತೆ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ರೀತಿ ಕಮಿಷನ್ ಪಡೆದಿದ್ದರೆ ಇವತ್ತು ನಾನು ದುಡ್ಡು ಚೆಲ್ಲಿ ಮತ ಪಡೆಯಬಹುದಿತ್ತು. ಆದರೆ, ಆ ದುಡ್ಡಿನಿಂದ ಈ ಪಕ್ಷಗಳು ಮತದಾರರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.