ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ್ಸ್ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿ ಭೀಮನಗೌಡ ಹಣಮಂತಗೌಡ ಪಾಟೀಲ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿದ್ದಾನೆ.
ಮೂಲತಃ ಬಾಗಲಕೋಟ ಜಿಲ್ಲೆಯ ಬುದ್ನಿ ಗ್ರಾಮದ ರೈತ ಕುಟುಂಬದ ಈತ 9 ಮತ್ತು 10 ನೇ ತರಗತಿಯನ್ನು ಆಕ್ಸಫರ್ಡ್ ಶಾಲೆಯಲ್ಲಿ ಕಲಿತಿದ್ದಾನೆ. 6-8 ತರಗತಿಯನ್ನು ಮುದ್ದೇನಹಳ್ಳಿಯ ಸಾಯಿ ಶಾಲೆಯಲ್ಲಿ, 1-5 ತರಗತಿಯನ್ನು ಬಾಗಲಕೋಟ ಜಿಲ್ಲೆ ಬಂಟನೂರಿನಲ್ಲಿ ಕಲಿತಿದ್ದಾನೆ. ಪಿಯುಸಿ ವಿಜ್ಞಾನ ಕಲಿತು ಜೆಇಇ ಪಾಸಾಗಿ ಐಐಟಿಗೆ ಸೇರುವುದು ಅವನ ಜೀವನದ ಗುರಿಯಾಗಿದೆ. ಈತನಿಗೆ ಒಬ್ಬ ಸಹೋದರ ಇದ್ದು 9 ತರಗತಿಯಲ್ಲಿದ್ದಾನೆ.
ಈತನಂತೆ 625 – ಅನುಪಮ ಶ್ರೀಶೈಲ್ ಹಿರಿಹೋಳಿ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೌದತ್ತಿ, ಬೆಳಗಾವಿ ಜಿಲ್ಲೆ
625 – ಯಶಸ್ ಗೌಡ, ಬಾಲಗಂಗಾಧರ ಸ್ವಾಮಿ ಹೈಸ್ಕೂಲ್ ಚಿಕ್ಕಬಳ್ಳಾಪುರ
625- ಭೂಮಿಕ ಪೈ, ನ್ಯೂ ಮೆಕಾಲೆ ಇಂಗ್ಲೀಷ್ ಸ್ಕೂಲ್, ಹೊಸೂರು ರೋಡ್, ಬೆಂಗಳೂರು ಇವರು ಕೂಡ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ.
ಚಾಲಕನ ಮಗ ರಾಜ್ಯಕ್ಕೆ ಮೂರನೇ ಸ್ಥಾನ: ಇನ್ನು ಚಿದಾನಂದ ಪ್ರಕಾಶ ಪಟ್ಟಣರ SSLC ಪರೀಕ್ಷೆಯಲ್ಲಿ 625 ಕ್ಕೆ 623 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ತೃತೀಯ ಮತ್ತು ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ತಂದೆ ಪ್ರಕಾಶ ವಾಹನ ಚಾಲಕರಾಗಿದ್ದು, ತಾಯಿ ವೀಣಾ ಕೂಲಿ ನೇಕಾರ ಕಾರ್ಮಿರಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಸೋಮವಾರ ಚಿದಾನಂದ ಪಟ್ಟಣರ ಮನೆಗೆ ಭೇಟಿ ನೀಡಿದಾಗ ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗಿದ್ದರು. ಚಿಕ್ಕದಾದ ಮನೆಯಲ್ಲಿ ಸಹೋದರನೊಂದಿಗೆ ಫಲಿತಾಂಶವನ್ನು ನೋಡುತ್ತಿದ್ದರು. ಚಿದಾನಂದ ಕನ್ನಡ:125, ಇಂಗ್ಲಿಷ್: 100, ಹಿಂದಿ: 100, ಗಣಿತ: 100, ವಿಜ್ಞಾನ:99 ಮತ್ತು ಸಮಾಜ ವಿಜ್ಞಾನಕ್ಕೆ 99 ಅಂಕಗಳನ್ನು ಪಡೆದುಕೊಂಡಿದ್ದಾರೆ.
ನಾನು ಮತ್ತು ಪತ್ನಿ ನಿತ್ಯ ದುಡಿಯಲು ಬೇರೆ ಕಡೆಗೆ ಹೋಗುತ್ತಿದ್ದೇವು. ಚಿದಾನಂದ ತಾನೇ ಮನೆಯಲ್ಲಿ ಕುಳಿತುಕೊಂಡು ಓದುತ್ತಿದ್ದ. ಬೆಳಗ್ಗೆ ಟ್ಯೂಶನ್ ಮುಗಿಸಿಕೊಂಡು ಬಂದು ಓದುವುದು, ನಂತರ ಶಾಲೆ ಮತ್ತೆ ಸಂಜೆಗೆ ಬಂದು ಎಂದಿನಂತೆ ಓದುತ್ತಿದ್ದ. ಉತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾನೆ ಎಂಬ ವಿಶ್ವಾಸವಿತ್ತು. ಆದರೆ ಈಗ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಚಿದಾನಂದ ತಂದೆ ಪ್ರಕಾಶ ತಿಳಿಸಿದರು.
ನಿತ್ಯ ಓದುತ್ತಿದ್ದೆ. ಪರೀಕ್ಷೆಯ ಸಮಯದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಓದುತ್ತಿದ್ದೆ. ಶಾಲೆಯ ಶಿಕ್ಷಕರ ಪ್ರೋತ್ಸಾಹ ಮತ್ತು ತಂದೆ ತಾಯಿಗಳ ಆಶೀರ್ವಾದದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಚಿದಾನಂದ ತಿಳಿಸಿದರು.
ರಬಕವಿ ಬನಹಟ್ಟಿ ತಾಲೂಕಿನ ಎಸ್‌ಆರ್‌ಎ ಪ್ರೌಢ ಶಾಲೆಯ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದು, ರಬಕವಿ ಬನಹಟ್ಟಿ ತಾಲೂಕು ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಯುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸನ್ನವರ ಮತ್ತು ನೋಡಲ್ ಅಧಿಕಾರಿ ಶ್ರೀಶೈಲ ಬುರ್ಲಿ ತಿಳಿಸಿದ್ದಾರೆ.