ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಹಾಗೂ ಮುಧೋಳ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಾವೇ ಕೊಟ್ಟ ಭರವಸೆಗಳು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಶುಕ್ರವಾರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮುಖ್ಯಮಂತ್ರಿಗಳನ್ನು ಸಾರಿಗೆ ನೌಕರರು ಭೇಟಿ ಮಾಡಿ ಸಮಸ್ತ ನೌಕರರ ಪರವಾಗಿ ಮನವಿ ಸಲ್ಲಿಸಿದರು.
ಕಳೆದ 2021ರ ಏಪ್ರಿಲ್ನಲ್ಲಿ ನಡೆದ ಮುಸ್ಕರ ಸಮಯದಲ್ಲಿ ಆದಂತಹ ಎಲ್ಲ ತೊಂದರೆಗಳನ್ನು ನಿವಾರಿಸುವ ಮೂಲಕ ಸಾರಿಗೆ ನಿಗಮಗಳಲ್ಲಿ 6/04/2021 ರ ಯಥಾ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.
ಇನ್ನು ಪ್ರಮುಖವಾಗಿ ವೇತನ ಆಯೋಗದ ಅಡಿಯಲ್ಲಿ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು. ಕಾರ್ಮಿಕ ಸಂಘಗಳ ಚುನಾವಣೆ ನಡೆಸಬೇಕು. ಆದ್ದರಿಂದ ಆ ಬಗ್ಗೆ ಹೆಚ್ಚಿನ ಗಮನಕೊಡಬೇಕು ಎಂದು ಮನವಿ ಮಾಡಿದರು.
ಅಲ್ಲದೆ ಮುಷ್ಕರದ ಸಮಯದಲ್ಲಿ ಆದಂತಹ ಸುಳ್ಳು ಪೊಲೀಸ್ ಪ್ರಕರಣಗಳನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳಿ ಎಂಬುವುದು ಸೇರಿದಂತೆ ಸರ್ಕಾರವೇ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು ಎಂದು ಕೇಳಿಕೊಂಡರು.
ಅದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಚರ್ಚೆ ನಡೆಸಿದ್ದು ಮತ್ತೊಮ್ಮೆ ಕುಲಂಕುಶವಾಗಿ ಪರಿಶೀಲಿಸಿ ಶೀಘ್ರದಲ್ಲೇ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ನೌಕರರ ಕೂಟದ ಮುಖಂಡರಾದ ಶಶಿಕಾಂತ್ ಪಾಟೀಲ್, ಬಸವರಾಜ್ ಪಂಡರಿ, ಉಮೇಶ್ ಪನದಿ, ವಿಠ್ಠಲ್ ಸಂಕ್ರಿ, ಕೃಷ್ಣಪ್ಪ ನಂದಗಾವಿ, ಲಕ್ಷಣ ಹಕಾಟಿ, H. H. ನದಾಫ್, ಶರಣಯ್ಯ ಹಿರೇಮಠ್, ನಾಡಗೌಡ್ರ, ಬಾಬಾಗೌಡ ಪಾಟೀಲ್ ಸೇರಿದಂತೆ ಎಲ್ಲ ಕೂಟದ ಪದಾಧಿಕಾರಿಗಳು ನೂರಾರು ನೌಕರರು ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)