ರಾಜ್ಯದ ವಿವಿಧೆಡೆ ವರ್ಷಧಾರೆ ಆಗಮನ
ಆಲಿಕಲ್ಲು ಸಹಿತ ಅಬ್ಬರ l ಕೆಲವೆಡೆ ಬಂದು ಹೋದ ವರುಣ l ಏ.7,8ರಂದು ಭಾರಿ ಮಳೆ ಸಂಭವ
ಮೈಸೂರು: ರಾಜ್ಯದ ವಿವಿಧೆಡೆ ಭಾನುವಾರ ಸಂಜೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಕೊಡಗು, ಶಿವಮೊಗ್ಗ, ದಾವಣಗೆರೆ, ಹಾಸನ, ಧಾರವಾಡ, ಬೆಳಗಾವಿ, ಗದಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರವಾಗಿ ವರ್ಷಧಾರೆಯಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ನಾಪೋಕ್ಲು ಪಟ್ಟಣ, ಕೊಳಕೇರಿ, ಕುಂಜಿಲ, ಕಕ್ಕಬ್ಬೆ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕುಂಜಿಲದಲ್ಲಿ 35 ಮಿ.ಮೀ, ನಾಪೋಕ್ಲು ವ್ಯಾಪ್ತಿಯಲ್ಲಿ 25 ಮಿ.ಮೀ ಮಳೆ ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಬಾಳೆಹೊನ್ನೂರು, ಶೃಂಗೇರಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಂಜೆ ಸಾಧಾರಣವಾಗಿ ವರುಣನ ಆಗಮನವಾಗಿದೆ. ಗುಡುಗು ಮತ್ತು ಸಿಡಿಲಿನ ಅಬ್ಬರದ ನಡುವೆ ಅರ್ಧ ಗಂಟೆಗೂ ಹೆಚ್ಚು ಮಳೆ ಬಿದ್ದಿದ್ದು, ಬಿಸಿಲ ಬೇಗೆಯಿಂದ ಬಳಲಿದವರಿಗೆ ತಂಪೆರದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣೆಹಳ್ಳಿ ಭಾಗದಲ್ಲಿ ಆಲಿಕಲ್ಲು ಸಹಿತ ಕೆಲ ಕಾಲ ಮಳೆ ಬಿದ್ದಿದೆ. ಇನ್ನು, ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ ತಾಲೂಕುಗಳಲ್ಲಿ ವರುಣನ ಆರಭಟವಿಲ್ಲ ಬದಲಿಗೆ ಚಿಮ್ಮಿಸಿ ಹೋಗಿದ್ದಾನೆ. ಸಾಗರ ತಾಲೂಕು ಹೊಸೂರು ಗ್ರಾಪಂ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಕೋಣಂದೂರಿನಲ್ಲಿ ಹತ್ತು ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ.
ಇದರ ಜತೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಇನ್ನು ಮಂಡ್ಯ ಜಿಲ್ಲೆಯ ಹಲವೆಡೆಯೂ ತುಂತುರು ಮಳೆ ಸುರಿದಿದೆ. ಇನ್ನು ಹಾಸನದ ಬೇಲೂರಿನಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ. ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ ಬೆಳಗಿನ ಜಾವ ಮಳೆಯಾಗಿದ್ದು, ಯಮಕನಮರಡಿ, ಯರಗಟ್ಟಿ, ಬೈಲಹೊಂಗಲ, ಕಿತ್ತೂರು, ಸಾಂಬ್ರಾಕ್ಕೂ ಭೇಟಿ ನೀಡಿ ಹೋಗಿರುವ ವರುಣ ತಂಪಿನ ವಾತಾವರಣ ನಿರ್ಮಾಣ ಮಾಡಿದ್ದಾನೆ.
7,8 ರಂದು ರಾಜ್ಯದಲ್ಲಿ ಭಾರಿ ಮಳೆ ಸಂಭವ
ಏ. 7 ಮತ್ತು 8 ರಂದು ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 22 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಏ.7 ಮತ್ತು 8ರಂದು ರಾಜ್ಯದ ವಿವಿಧೆಡೆ ವರುಣನ ಆರ್ಭಟ ಶುರುವಾಗಲಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ದಾವಣಗೆರೆ, ಹಾಸನ, ಕೊಡಗು ಮತ್ತು ಮೈಸೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಎರಡು ದಿನ ಭಾರಿ ಮಳೆಯಾಗುವ ಸಂಭವವಿರುವುದರಿಂದ ತರಕಾರಿ ಫಸಲಿಗೆ ಹದವಾಗಿ ನೀರು ಹಾಯಿಸುವಂತೆ ಇಲಾಖೆ ಆಹಿತಿ ನೀಡಿದ್ದು, ಟೊಮ್ಯಾಟೊ, ಬೀನ್ಸ್, ಹೂಕೋಸು ಸೇರಿದಂತೆ ಹಲವು ಫಸಲು ಕಟಾವಿಗೆ ಬಂದಿದ್ದರೆ ಕೊಯ್ದುಕೊಳ್ಳುವಂತೆ ಸೂಚನೆ ನೀಡಿದೆ.