NEWSನಮ್ಮಜಿಲ್ಲೆ

ಲಾಕ್‌ಡೌನ್ ಆದೇಶ ಉಲ್ಲಂಘಿಸಿದವರ ವಿರುದ್ಧ FIR

ಕೊಪ್ಪಳ ಜಿಲ್ಲೆಯಾದ್ಯಂತ 29 ಪ್ರಕರಣಗಳು ದಾಖಲು

ವಿಜಯಪಥ ಸಮಗ್ರ ಸುದ್ದಿ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡಿದ ಕುರಿತಂತೆ ಏಪ್ರಿಲ್ 02 ರವರೆಗೆ 29 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಲಾಕ್‌ಡೌನ್ ಆದೇಶ ಉಲ್ಲಂಘನೆ ಪ್ರಕರಣಗಳಲ್ಲಿ ಇದುವರೆಗೂ ಒಟ್ಟು 37 ಜನರನ್ನು ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂಲದ 174 ವಲಸೆ ಕಾರ್ಮಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ವಯೋವೃದ್ಧರು, ಭಿಕ್ಷುಕರು, ಅನಾಥ ಮತ್ತು ನಿರ್ಗತಿಕರನ್ನು ಒಳಗೊಂಡಂತೆ ಸುಮಾರು 125 ಜನರಿಗೆ ಜಿಲ್ಲೆಯ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯವನ್ನು ಕಲ್ಪಿಸಲಾಗಿದೆ. ಮಾತ್ರವಲ್ಲದೇ 110 ಜನ ಅನಾಥ, ನಿರ್ಗತಿಕರಿಗೆ ಆಹಾರದೊಂದಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ.

ಕೊಪ್ಪಳ ನಗರದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಪಡಿತರ ಚೀಟಿ ಹೊಂದಿಲ್ಲದಿರುವ 102  ಕುಟುಂಬಗಳ 486 ಜನರಿಗೆ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ವಾಸವಿರುವ ಮಧ್ಯಪ್ರದೇಶದ 30 ಜನರಿಗೆ ಸಂಘ ಸಂಸ್ಥೆಗಳ ನೆರವಿನಿಂದ ಅಗತ್ಯ ಆಹಾರ ಮತ್ತು ದಿನ ಬಳಕೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಆದ್ದರಿಂದ ಸಾರ್ವಜನಿಕರು ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೇ, ಕೊರೋನಾ ಪಿಡುಗನ್ನು ಜಿಲ್ಲೆಯಿಂದ ಹೊರಗಿಡಲು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

Leave a Reply

error: Content is protected !!