ಮೈಸೂರು: ಇಂದು ಕಾಲ ಹಿಂದಿನಂತಿಲ್ಲ. ಇದು ವೇಗದ ಜಗತ್ತು. ಬಿಡುವಿಲ್ಲದ ಸಮಾಜ. ಹಾಗಾಗಿ ಸ್ವಂತ ಮಕ್ಕಳಿಗೇ ಗಂಡಿಗೆ ಹೆಣ್ಣು ಹುಡುಕಿ, ಹೆಣ್ಣಿಗೆ ಗಂಡು ಹುಡುಕಿ ಮದುವೆ ಮಾಡುವಷ್ಟು ವ್ಯವಧಾನ ಬಹಳಷ್ಟು ಮಂದಿ ತಂದೆ ತಾಯಿಗಳಿಗೆ, ಪೋಷಕರಿಗಿಲ್ಲದೇ ಇರುವುದರಿಂದ ಇಂತಹವರಿಗೆಲ್ಲ ಇಂದು ವಧು ವರರ ಸಮಾವೇಶಗಳು ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ವಿವಿಧ ಬ್ರಾಹ್ಮಣ ಸಂಘಟನೆಗಳು ನಗರದ ಉತ್ತರಾದಿ ಮಠದ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 46ನೇ ರಾಜ್ಯಮಟ್ಟದ ಬ್ರಾಹ್ಮಣ ವಧು ವರಾನ್ವೇಷಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಪರಿಪೂರ್ಣ ಜೀವನದ ಸಾರ್ಥಕತೆ ಎಂಬುದು ವೈವಾಹಿಕ ಬದುಕಿನಲ್ಲಿದ್ದು ಇಂತಹ ಕಲ್ಯಾಣ ಕಾರ್ಯಕ್ಕೆ ವಧು ವರಾನ್ವೇಷಣೆಯೇ ಇಂದಿನ ದಿನಗಳಲ್ಲಿ ತುಂಬಾ ಕಷ್ಟಕರವಾಗಿದೆಯೆಂದರು.
ಹಿಂದೆಲ್ಲಾ ಬಂಧು, ಬಳಗ, ಸ್ನೇಹಿತರು, ನೆಂಟರು, ಇಷ್ಟರು ಇವರೆಲ್ಲಾ ದೂರದಲ್ಲಿದ್ದರೂ ಹತ್ತಿರದಲ್ಲೇ ಇದ್ದಷ್ಟು ಆತ್ಮೀಯತೆ ಇತ್ತು. ಒಂದು ಹುಡುಗನ ಅಥವಾ ಒಂದು ಹುಡುಗಿಯ ಮದುವೆ ಎಂದರೆ ಎಲ್ಲರೂ ಕೂಡಿ ಒಬ್ಬರಿಗೊಬ್ಬರು ಹೇಳಿಕೊಂಡು ಬಹುಬೇಗನೆ ವಧು ವರರನ್ನು ಸೇರಿಸಿ ಮದುವೆಯನ್ನು ಮಾಡಿ ಮುಗಿಸಿಬಿಡುತ್ತಿದ್ದರು.
ಆದರೆ ಈಗ ಕಾಲ ಮೊದಲಿನಂತಿಲ್ಲ. ಪಕ್ಕದ ಬೀದಿಯಲ್ಲಿ ಅಥವಾ ನೆರೆ ಮನೆಯಲ್ಲೇ ಬಂಧು, ಬಳಗ, ಸ್ನೇಹಿತರು, ನೆಂಟರಿಷ್ಟರು ಹತ್ತಿರದಲ್ಲೇ ಇದ್ದರೂ ಕೂಡ ದೂರದವರಾಗಿರುತ್ತಾರೆ. ಒಬ್ಬರಿಗೊಬ್ಬರು ನೆರವಾಗುವಂತಹ ಆತ್ಮೀಯತೆ ಎಂಬುದನ್ನು ಯಾರಿಂದಲೂ ಇಂದು ನಿರೀಕ್ಷಿಸಲಾಗುತ್ತಿಲ್ಲ. ಅವರಿಗೆ ಅವರದೇ ಆದ ನೂರಾರು ಸಮಸ್ಯೆಗಳು.
ಇಂತಹ ಕಾಲಘಟ್ಟದಲ್ಲಿ ಮಕ್ಕಳಿಗೆ ಮದುವೆ ಮಾಡಬೇಕಾದರೆ ತಕ್ಷಣಕ್ಕೆ ಸಹಾಯಕ್ಕೆ ಬರುತ್ತಿರುವುದು ವಿವಾಹ ವೇದಿಕೆಗಳಂತಹ ವಧು-ವರಾನ್ವೇಷಣೆಯ ಸಮಾವೇಶಗಳೆ. ಹೀಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಇಂತಹ ವೇದಿಕೆಗಳನ್ನು, ಸಮಾವೇಶಗಳನ್ನು ತಮ್ಮ ಮಕ್ಕಳಿಗೆ ಮದುವೆ ಮಾಡಲಿಚ್ಛಿಸುವ ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಇದಕ್ಕೂ ಮುನ್ನ ಮೇಲುಕೋಟೆಯ ವಂಗಿಪುರ ನಂಬಿ ಮಠದ ಶ್ರೀ ಇಳೈಆಳ್ವಾರ್ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಸ್ಕೃತಿ ಚಿಂತಕ ಡಾ.ರಘುರಾಮ್ ವಾಜಪೇಯಿ ಅವರು ಸಮಾವೇಶವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್ ಹಾಗೂ ವಕೀಲೆ ಜಯಶ್ರೀ ಶಿವರಾಮ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ರಾಘವೇಂದ್ರ ನಗರದ ಶ್ರೀ ಪಾಳ್ಯಮ್ ಪೀಠದ ಡಾ.ಮುರಳೀಧರ ಶಾಸ್ತ, ಕಾರ್ಮಿಕ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ಜಗದೀಶ್, ಸಪ್ತಪದಿ ಫೌಂಡೇಶನ್ ಟ್ರಸ್ಟ್‌ನ ವ್ಯವಸ್ಥಾಪಕ ಬಾಲಕೃಷ್ಣ ಸಂಗಾಪುರ, ಪತ್ರಕರ್ತ ಹೊಮ್ಮ ಮಂಜುನಾಥ್ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಪ್ತಪದಿ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಎಸ್. ಶ್ರೀನಿವಾಸ ಭಾರದ್ವಾಜ್ ಅಧ್ಯಕ್ಷತೆ ವಹಿಸಿದ್ದರು.
ಅಂತಿಮವಾಗಿ ಇಳೈ ಆಳ್ವಾರ್ ಸ್ವಾಮೀಜಿ ಅವರು ಆಶೀರ್ವಚನದ ನುಡಿಗಳನ್ನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಹಿರಿಯ ಚಲನಚಿತ್ರ ಪತ್ರಕರ್ತ ಹಾಗೂ ಪತ್ರಿಕಾ ವಿತರಕ ಎಂ. ಆರ್. ಸುಬ್ರಹ್ಮಣ್ಯ, ಸಾಹಿತಿ ಬನ್ನೂರು ಕೆ.ರಾಜು, ಜ್ಯೋತಿಷಿ ಡಾ.ರಾಘವನ್ ಶಾಸ್ತ್ರಿ, ಸಮಾಜ ಸೇವಕ ಡಾ. ಆರ್. ಚಕ್ರಪಾಣಿ, ಶ್ರೀ ವಿದ್ಯಾಭಾರತಿ ಕಲ್ಯಾಣ ಮಂಟಪದ ವ್ಯವಸ್ಥಾಪಕ ರವಿಶಂಕರ್ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಮಾವೇಶದಲ್ಲಿ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.