ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಹಿಂದಿನ NEKRT)ದ ವಿಜಯಪುರ ವಿಭಾಗದ ಇಂಡಿ ಘಟಕದಲ್ಲಿ ಚಾಲಕರಾಗಿ 2000ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ವಿ.ಅನ್ನಪ್ಪನವರನ್ನು ದೀರ್ಘಕಾಲ ಗೈರುಹಾಜರಾಗಿದ್ದಾರೆ ಎಂಬ ಕಾರಣ ನೀಡಿ ಕೆಲಸದಿಂದ ವಜಾಗೊಳಿಸಲಾಯಿತು. ಆ ಬಳಿಕ ಈವರೆಗೂ ಅವರಿಗೆ ಗ್ರಾಚ್ಯುಟಿ, ಪಿಎಫ್‌ಹಣ ಕೊಡದೆ ಸತಾಯಿಸುತ್ತಿದ್ದರು, ಈ ಬಗ್ಗೆ ವಿಜಯಪಥ ಇದೇ ಏಪ್ರಿಲ್ 10ರಂದು ವರದಿ ಮಾಡಿತ್ತು.
ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಇದೇ ಏಪ್ರಿಲ್ ಒಂದರಿಂದಲೇ ಅನ್ವಯವಾಗುವಂತೆ 65,966 ರೂ.ಗಳನ್ನು ಬಿಡುಗಡೆ ಮಾಡಿ ಚೆಕ್ ಕೊಟ್ಟಿದ್ದಾರೆ. ಆದರೆ, ಅವರಿಗೆ 1.65 ಲಕ್ಷ ರೂ.ಗಳಿಗೂ ಅಧಿಕ ಹಣ ಬರಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ.
ವಿವರ: ವಜಾ ಮಾಡುವ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಅನ್ನಪ್ಪನವರು Medical certificate ತಂದು ಕೊಟ್ಟಿದ್ದಾರೆ. ಆದರೆ, ಅದಾವುದನ್ನು ಲೆಕ್ಕಿಸದ ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕ ಅನ್ನಪ್ಪನವರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದರು.
ವಜಾಗೊಂಡ ಬಳಿಕ ತಮಗೆ ಸಂಸ್ಥೆಯಿಂದ ಬರಬೇಕಿದ್ದ ಗ್ರಾಚ್ಯುಟಿ, ಪಿಎಫ್ ಹಣಕ್ಕಾಗಿ ಲೆಕ್ಕವಿಲ್ಲದಷ್ಟು ಬಾರಿ ಸಂಸ್ಥೆಯ ವಿಭಾಗೀಯ ಕಚೇರಿಗೆ ಸುಮಾರು 21ವರ್ಷಗಳ ಕಾಲ ಅಲೆದು ಅಲೆದು ಸುಸ್ತಾಗಿದ್ದರು. ಆದರೂ ಅಧಿಕಾರಿಗಳು ಅನ್ನಪ್ಪನವರಿಗೆ ಕಾನೂನು ಬದ್ಧವಾಗಿ ಬರಬೇಕಿರುವ ಈ ಪಿಎಫ್‌ಹಣವನ್ನು ಕೊಡಲೇ ಇಲ್ಲ.
ಇದರಿಂದ ಇನ್ನಷ್ಟು ಬಳಲಿದ ಅನ್ನಪ್ಪನವರು ಕಳೆದ 2021ರಲ್ಲಿ ಮೃತಪಟ್ಟರು. ಆದರೂ ಅವರಿಗೆ ಸೇರಬೇಕಾದ ಹಣ ಮಾತ್ರ ಬಿಡುಗಡೆಯಾಗಿಯೇ ಇರಲಿಲ್ಲ. ಈ ಬಗ್ಗೆ ವಿಜಯಪಥ ಸಮಗ್ರವಾಗಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಈಗ ಚೆಕ್ ನೀಡಿದ್ದಾರೆ.
2000ದಲ್ಲಿ ವಜಾಗೊಂಡ ಚಾಲಕ ಅನ್ನಪ್ಪನವರು 2021ರವರೆಗೂ ತಮಗೆ ಬರಬೇಕಿರುವ ಹಣಕ್ಕಾಗಿ ಅಲೆದು ಅಲೆದು ಕೊನೆಗೆ ಅದನ್ನು ಪಡೆಯಲಾಗದೇ ಅಸುನೀಗಿದರು. ಆ ಬಳಿಕ ಅವರ ಪತ್ನಿ ಶಾರದಾ ಬಾಯಿ ಅವರು, ಈವರೆಗೂ ಅಲೆಯುತ್ತಲೇ ಇದ್ದರು.
ಈಗ 1.65 ಲಕ್ಷ ರೂಪಾಯಿ ಬರಬೇಕು ಎಂದು ಮೃತ ಚಾಲಕನ ಪತ್ನಿ ಶಾರದಾ ಬಾಯಿ ಅವರು ಹೇಳುತ್ತಿದ್ದಾರೆ. ಆದರೆ ಕೇವಲ 65,966 ರೂಪಾಯಿ ಕೊಟ್ಟು ಅಧಿಕಾರಿಗಳು ಸುಮ್ಮನಾಗಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಶಾರದಾ ಬಾಯಿ ಒತ್ತಾಯಿಸಿದ್ದಾರೆ.
ಒಟ್ಟಾರೆ ಕೆಕೆಆರ್‌ಟಿಸಿ ಅಧಿಕಾರಿಗಳು ಕಳೆದ 23 ವರ್ಷಗಳಿಂದ ಕಚೇರಿಗೆ ಅಲೆಸಿದ್ದು, ಈಗ ಇತಿಹಾಸವಾಗಿದೆ ಎಂದರೂ ಶಾರದಾ ಬಾಯಿ ಅವರಿಗೆ ಸೇರಬೇಕಾದ ಹಣವನ್ನು ಪ್ರಾಮಾಣಿಕವಾಗಿ ನೀಡಿಲ್ಲ ಎಂಬುವುದು ಅರಗಿಸಿಕೊಳ್ಳಲಾಗದ ವಿಷಯವಾಗಿದೆ.
ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡುವರೆ ಇಲ್ಲವೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.