ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ವೇಳೆ ಮತಯಂತ್ರ ಒಡೆದು ದಾಂಧಲೆ ನಡೆಸಿದ ಘಟನೆ ಜಿಲ್ಲೆಯ ಮುಸಬಿನಾಳದಲ್ಲಿ ನಡೆದಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಸಬಿನಾಳ ಗ್ರಾಮದಲ್ಲಿ ಮಧ್ಯಾಹ್ನ ದಾಂಧಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.
ಇವಿಎಂ ಬದಲಿಸಿದ್ದಾರೆ ಎಂದು ಕೋಪ: ಹೆಚ್ಚುವರಿ ಮತಯಂತ್ರಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಜನರು ಅದನ್ನು ಉರುಳಿಸಿ ಜಖಂಗೊಳಿಸಿದ್ದಾರೆ. ಇವಿಎಂ ಒಡೆದು ಹಾಕಿ ಗಲಾಟೆ ಮಾಡಿದ್ದಾರೆ.
ಅದಕ್ಕೆ ಕಾರಣ ಇವಿಎಂ ವಾಪಸ್ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಕೇಳಿದ್ದಾರೆ ಆ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರ ನೀಡಿಲ್ಲ. ಇದರಿಂದ ಆಕ್ರೋಶಗೊಂಡು ಮತದಾನವಾದ ಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಭಾವಿಸಿ ಗಲಾಟೆ ಮಾಡಿದ್ದಾರೆ.
ಇತ್ತ ಅರ್ಧಕ್ಕೆ ಮತದಾನ ಸ್ಥಗಿತಗೊಳಿಸಿ ಮತಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಗಲಾಟೆ ಮಾಡಿದ್ದರು. ಅಲ್ಲದೆ ಮತಯಂತ್ರ, ವಿವಿಪ್ಯಾಟ್ ಇದ್ದ ಕಾರಿನ ಮೇಲೆ ದಾಳಿ ಮಾಡಿ ಅದನ್ನು ಜಖಂಗೊಳಿಸಿದ್ದರು.
ಸಿಬ್ಬಂದಿ ಮೇಲೆ ಸಹ ಹಲ್ಲೆ ಮಾಡಿದ್ದರು. ಇವಿಎಂ ಬದಲಾವಣೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಘಟನೆ ನಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಎಸ್‌ಪಿ ಎಚ್.ಡಿ. ಆನಂದ್ ಕುಮಾರ್ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಗ್ರಾಮಸ್ಥರು ಇವಿಎಂ, ವಿವಿಪ್ಯಾಟ್ ಒಡೆದು ಹಾಕಿದ್ದಾರೆ. ಇವಿಎಂ ಸಾಗಣೆ ಮಾಡುತ್ತಿದ್ದ ಕಾರನ್ನು ಜಖಂಗೊಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಘಟನೆಗೆ ಸಬಂಧ ಈಗಾಗಲೇ 30 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾರೇ ಕಾನೂನು ಕೈಗೆತ್ತಿಕೊಂಡರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು, ಯಾವುದೇ ಸಮಸ್ಯೆ ಇಲ್ಲದೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಹೇಳಿದರು.