ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದಿದ್ದಲ್ಲಿ 2020ರ ಜೂನ್ 10 ರಿಂದ ಒಂದು ತಿಂಗಳೊಳಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಕೂಡಲೇ ಹಿಂತಿರುಗಿಸಿ ರದ್ದುಪಡಿಸಿಕೊಳ್ಳಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕೆಲವು ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಇನ್ನಿತರ ಅಧಿಕಾರಿ ಮತ್ತು ನೌಕರರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದು ಸರ್ಕಾರದಿಂದ ವಿತರಿಸುವ ಪಡಿತರ ಮತ್ತು ಇನ್ನಿತರ ಸರ್ಕಾರಿ ಸೇವೆಗಳನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಎಲ್ಲರೂ ಹಿಂತಿರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿಗಳಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿ, ನೌಕರ ಅಥವಾ ಆತನ/ಆಕೆಯ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ಹಿಂದಿರುಗಿಸಬೇಕೆಂದು ಸರ್ಕಾರ ಜೂನ್ 10 ರಂದು ಸುತ್ತೋಲೆ ಹೊರಡಿಸಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ/ದೂರುಗಳು ಸ್ವೀಕೃತವಾಗಿದ್ದಲ್ಲಿ ಅಂತಹ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಇದಲ್ಲದೇ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಒಬ್ಬ ಸರ್ಕಾರಿ ನೌಕರನಾಗಿ ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧ ಹಾಗೂ ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ವರ್ತನೆಯಾಗಿದೆ. ಸರ್ಕಾರಿ ಅಧಿಕಾರಿ/ ನೌಕರ ಸರ್ಕಾರದಿಂದ ವೇತನ ಭತ್ಯೆಗಳನ್ನು ಪಡೆಯುತ್ತಿರುವುದರಿಂದ ಯಾವ ರೀತಿಯಲ್ಲೂ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)