ನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಅಧಿಕಾರಿಗಳ ಕಳ್ಳಾಟ: ಕಷ್ಟಕಾಲಕ್ಕೆ ಆಗುತ್ತದೆ ಎಂದು ಕಟ್ಟಿದ ಎಲ್‌ಐಸಿಯೂ ಸಿಗದೆ ನೌಕರರ ಪರದಾಟ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ನೋವಿಗೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಪೂರ್ಣ ಪ್ರಮಾಣದ ಕೆಲಸ ಮಾಡಿದರೂ ಅರ್ಧ ವೇತನ ಪಡೆಯುವ, ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳಿಗೂ ತಿಂಗಳುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

ಈ ಎಲ್ಲದರ ನಡುವೆ ಭಾರತೀಯ ಜೀವ ವಿಮೆಯಿಂದ (ಎಲ್‌ಐಸಿ) ಬರಬೇಕಾದ ಮನಿಬ್ಯಾಕ್‌ಪಾಲಿಸಿ ಸೌಲಭ್ಯ, ಮರಣಾನಂತರದ ಪರಿಹಾರಕ್ಕಾಗಿಯೂ ಸಂಕಷ್ಟ ಪಡಬೇಕಾಗಿದೆ.

ವೇತನದಲ್ಲಿ ನೌಕರರ ಪಾಲಿನ ಕಂತು ಕಡಿತವಾಗಿದ್ದರೂ ವಿಮಾ ಕಂಪನಿಗೆ ಸಮಯಕ್ಕೆ ಸರಿಯಾಗಿ ಪಾವತಿಸದೆ ಭ್ರಷ್ಟ ಅಧಿಕಾರಿಗಳು ಆ ಹಣವನ್ನು ಬಡ್ಡಿ ಬಿಟ್ಟುಕೊಂಡು 3-6 ತಿಂಗಳಾದರೂ ಪಾವತಿ ಮಾಡುವುದಿಲ್ಲ. ಇದರಿಂದ ನೌಕರರಿಗೆ ಬರಬೇಕಾದ ವಿಮೆ ಹಣವು ಸರಿಯಾದ ಸಮಯಕ್ಕೆ ಕೈ ಸೇರುತ್ತಿಲ್ಲ. ಇದು ನೌಕರರಿಗೆ ಸಂಕಷ್ಟ ತಂದೊಡ್ಡಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿಯಲ್ಲಿ ಈ ಸಮಯಸ್ಯೆ ಅನಾದಿಕಾಲದಿಂದಲೂ ಇದೆ. ಈ ಬಗ್ಗೆ ನೌಕರರನ್ನು ಕೇಳಿದರೆ ಅವರು ಅಧಿಕಾರಿಗಳ ಭ್ರಷ್ಟಚಾರದ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ ಧೈರ್ಯವಾಗಿ ನಮ್ಮ ಪಾವತಿಸಿ ಎಂದು ಕೇಳುತ್ತಿಲ್ಲ. ಇದು ಭ್ರಷ್ಟ ಅಧಿಕಾರಿಗಳಿಗೆ ರಹದಾರಿಯಾಗಿದೆ.

ಇನ್ನು ಉದಾಹರಣೆಗೆ ಹೇಳಬೇಕೆಂದರೆ ಹುಬ್ಬಳ್ಳಿ ವಿಭಾಗ ಹಾಗೂ ಹುಬ್ಬಳ್ಳಿ ನಗರ ಸಾರಿಗೆ ವಿಭಾಗದಲ್ಲಿ ನೌಕರರು ವಿಮಾ ಕಂಪನಿಯಿಂದ ಪಡೆಯುವ ಸೌಲಭ್ಯ ದೊರೆಯದೆ ಪರದಾಡುತ್ತಿದ್ದಾರೆ. ತಾವು ಮಾಡದ ತಪ್ಪಿಗೆ ಪರಿತಪಿಸುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ನೌಕರರ ಪ್ರತಿ ತಿಂಗಳ ವೇತನದಲ್ಲಿ ವಿಮೆ ಪಾಲಿನ ಕಂತು ಕಡಿತವಾಗುತ್ತಲೇ ಇದೆ. ಆದರೆ, ಅಧಿಕಾರಿಗಳು ಮಾತ್ರ ಅದನ್ನು ಸರಿಯಾದ ಸಮಯಕ್ಕೆ ತುಂಬದೆ ನಾಟಕವಾಡುತ್ತಿದ್ದಾರೆ.

ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಲ್ಲಿ ಸುಮಾರು 4,000 ನೌಕರರ ವಿಮಾ ಕಂತು ಆಗಿ ಜೂನ್‌2020ರಿಂದ ಆಗಸ್ಟ್‌2021ರವರೆಗೆ ಒಟ್ಟು 6 ಕೋಟಿ ರೂ.ಗಳನ್ನು ಎಲ್‌ಐಸಿ ಕಚೇರಿಗೆ ಪಾವತಿ ಮಾಡಲಾಗಿದೆ. ಆದರೆ, ವಿಮಾ ಕಂತು ಪಾವತಿ ವಿಳಂಬವಾಗಿರುವುದರಿಂದ ಎಲ್‌ಐಸಿಯವರು ನೌಕರರ ವಿಮಾ ಖಾತೆಗಳಿಗೆ ಈ ಹಣವನ್ನು ಪಾವತಿಸದೆ, ಅಮಾನತು ಖಾತೆಯಲ್ಲಿ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಮರಣ ಹೊಂದಿದ ನೌಕರರ ಅವಲಂಬಿತರು ವಿಮಾ ಪರಿಹಾರ ಪಡೆಯಲು ಮುಂದಾದರೆ ಅದು ದೊರೆಯುತಿಲ್ಲ. ಅದೇ ರೀತಿ ಮನಿಬ್ಯಾಕ್‌ಪಾಲಿಸಿ ಮಾಡಿಸಿದವರಿಗೂ ಹಣ ಹಿಂದಿರುಗುವ ಅವಧಿ ಮುಗಿದರೂ ಹಣ ದೊರೆತಿಲ್ಲ.

ಅಂದಾಜು 10ರಿಂದ 30 ಸಾವಿರ ರೂ.ವರೆಗೆ ವಿವಿಧ ರೂಪದಲ್ಲಿ ನೌಕರರಿಗೆ ಮನಿಬ್ಯಾಂಕ್‌ಪಾಲಿಸಿ ಅಡಿಯಲ್ಲಿ ಹಣ ಬರಬೇಕಾಗಿದೆ. ಈ ಹಣಕ್ಕಾಗಿ 1,000ಕ್ಕೂ ಅಧಿಕ ನೌಕರರು ಕಾಯ್ದು ಕುಳಿತಿದ್ದಾರೆ ಎನ್ನಲಾಗುತ್ತಿದೆ.

ವಾಯವ್ಯ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಹಾಗೂ ಎಲ್‌ಐಸಿ ಅಧಿಕಾರಿಗಳು ಕುಳಿತು ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಗೊಂದಲ ನಿವಾರಣೆ ಮಾಡಿ ನೌಕರರಿಗೆ ಸಕಾಲಕ್ಕೆ ಪರಿಹಾರ ದೊರೆಯುವಂತೆ ಮಾಡಲು ಸೂಕ್ತ ಹಾಗೂ ತ್ವರಿತ ಕ್ರಮಕ್ಕೆ ಮುಂದಾಗಬೇಕಾಗಿದೆ.

ಕೇಂದ್ರ ಸಚಿವರಿಗೆ ಮನವಿ: ಎಲ್‌ಐಸಿ ಕಂತು ಪಾವತಿ ವಿಳಂಬದಿಂದ ಪರಿಹಾರ ಪಡೆಯಲು ಸಾಧ್ಯವಾಗದೆ ಸುಮಾರು 4,000 ನೌಕರರು ಸಂಕಷ್ಟ ಪಡುತ್ತಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿ ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ನೌಕರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅದರ ಪ್ರತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೂ ಸಲ್ಲಿಸಿದ್ದು, ಆದಷ್ಟು ಬೇಗ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಮ್ಮೆ ಯಾಕೆ ಪಾವತಿಸಬೇಕು?: ಮರಣ ಹೊಂದಿದ ನೌಕರರ ಅವಲಂಬಿತರು, ಮನಿಬ್ಯಾಕ್‌ಪಾಲಿಸಿ ಮಾಡಿಸಿದ ನೌಕರರು ಪರಿಹಾರಕ್ಕೆ ಎಲ್‌ಐಸಿ ಕಚೇರಿಗೆ ಹೋಗಿ ಕೇಳಿದರೆ, ಖಾತೆಗೆ ಹಣ ಜಮಾ ಆಗಲು ತಾಂತ್ರಿಕ ತೊಂದರೆ ಎದುರಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ ವಿಳಂಬವಾಗಿ ವಿಮಾ ಕಂತು ಪಾವತಿ ಆಗಿರುವುದಿಂದ ವಿಳಂಬ ಅವಧಿಯ ದಂಡ ಪಾವತಿಸಬೇಕಾಗಿದೆ. ಈ ಬಗ್ಗೆ ಧಾರವಾಡ ವಿಭಾಗೀಯ ಕಚೇರಿಯಿಂದ ಆದೇಶ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ.

ಪರಿಹಾರ ಬೇಕು ಎಂದಾದರೆ ವಿಮಾ ಕಂತಿನ ಬಾಕಿ ಹಾಗೂ ದಂಡದ ಹಣ ಪಾವತಿಸಿ, ಖಾತೆಯನ್ನು ಚಾಲ್ತಿಗೊಳಿಸಿದ ನಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಲಾಗುತ್ತಿದೆ ಎನ್ನಲಾಗಿದ್ದು, ಈಗಾಗಲೇ ಮಾಸಿಕವಾಗಿ ತಮ್ಮ ವೇತನದಲ್ಲಿ ವಿಮಾ ಕಂತು ಹಣ ಕಡಿತಗೊಂಡಿದ್ದು, ಮತ್ತೂಮ್ಮೆ ಯಾಕೆ ಪಾವತಿಸಬೇಕು ಎಂಬುದು ನೌಕರರ ಪ್ರಶ್ನೆಯಾಗಿದೆ.

ಅಲ್ಲದೆ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ದಿನಗಳಲ್ಲಿ ನಿಗಮಗಳ ಡಿಸಿಗಳು, ಎಂಡಿಗಳು, ನಿಗಮಗಳ ಆಡಳಿತ ವರ್ಗ ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸುವ ಬಗ್ಗೆಯೂ ನೌಕರರು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ