NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಅಧಿಕಾರಿಗಳ ಪರ ಬ್ಯಾಟ್‌ ಮಾಡುವ AITUC ಅಧ್ಯಕ್ಷ ಅನಂತಸುಬ್ಬರಾವ್  ಈಗ ನೌಕರರ ಹಿತಕಾಯುವ ನಾಟಕವಾಡುತ್ತಿದ್ದಾರೆಯೇ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನೌಕರರ ಹಿತ ಕಾಯುವ ನಾಟಕವಾಡಿಕೊಂಡು ಅಧಿಕಾರಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಂಡೇ ಬಂದಿರುವ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ (AITUC) ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್  ಈಗ ನೌಕರರ ಪರವಾಗಿದ್ದೇವೆ  ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ.

ಕಳೆದ 2020ರ ಜವರಿಯಿಂದಲೇ ಸಾರಿಗೆ ನೌಕರರಿಗೆ ವೇತನ ಹೆಚ್ಚಳವಾಗಬೇಕಿದೆ. ಆದರೆ ಆ ಬಗ್ಗೆ ಪ್ರಬಲವಾದ ಹೋರಾಟ ಮಾಡದೆ ಕುಂಟು ನೆಪಗಳನ್ನು ಹೇಳಿಕೊಂಡು ಕುಳಿತಿರುವ ಇವರು ಈಗ ಸಿಬ್ಬಂದಿ ವೆಚ್ಚವನ್ನು ತಗ್ಗಿಸಲು ವರದಿ ನೀಡಿರುವ ನಿವೃತ್ತ ಐಎಎಸ್‌ ಅಶಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯು ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನ ಮಾಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದೆ.

ಈ ಮೂಲಕ ದುಡಿಯುವ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಿ ಉಳಿಯುವ ನೌಕರರಿಗೆ ಕೆಲಸದ ಒತ್ತಡವನ್ನು ಜಾಸ್ತಿ ಮಾಡುವ ಶಿಫಾರಸನ್ನು ಕೊಟ್ಟಿದ್ದು, ಬಿಳಿ ಆನೆಯಾಗಿರುವ 4 ನಿಗಮಗಳನ್ನು ಒಗ್ಗೂಡಿಸಲು ಒಪ್ಪದಿರುವುದು ಆಶ್ಚರ್ಯದ ಸಂಗತಿ ಎಂದು ಈ ಅನಂತ ಸುಬ್ಬರಾವ್ ಟೀಕಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಇದು ಒಳ್ಳೆಯ ಬೆಳವಣಿಗೆಯೇ ಆಗಿದೆ. ಆದರೆ, ಈ ಪತ್ರದಿಂದ ನೌಕರರಿಗೆ ಅನುಕೂಲ ಮಾಡಿಕೊಡಲಾಗುತ್ತದೆಯೇ. ಇವರು ಬರೆದಿರುವ ಪತ್ರದಿಂದ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ಇವರು ಪತ್ರ ಬರೆಯುವ ಬದಲು ನೌಕರರಿಗೆ ಒಳ್ಳೆಯದಾಗುವ ರೀತಿಯಲ್ಲಿ ಏಕೆ ಹೋರಾಟ ರೂಪಿಸಬಾರದು ಎಂದು ನೊಂದ ನೌಕರರೇ ಹೇಳುತ್ತಿದ್ದಾರೆ.

ಅಂದಹಾಗೆ ಅನಂತಸುಬ್ಬರಾವ್ ಅವರು ಗುರುವಾರ   ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಅದರಲ್ಲಿ ‘ಸಾರಿಗೆ ನಿಗಮಗಳಿಗೆ ತಲಾ ಮೂವರು ಅಧ್ಯಕ್ಷರು, ಉಪಾಧ್ಯಕ್ಷರು, ಎಂಡಿಗಳು, ಅವರ ಸಿಬ್ಬಂದಿಗಳು, ಅವರ ಖರ್ಚು ವೆಚ್ಚಗಳು, 3 ಮಂಡಳಿಗಳು, ಇವುಗಳ ಅವಶ್ಯಕತೆ ಹೇಗೆ? ಎನ್ನುವುದನ್ನು ಸಮಿತಿ ಪರಿಶೀಲಿಸಿಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದ್ದಾರೆ.

ಇನ್ನು ಅಧಿಕಾರಿಗಳು ಮತ್ತವರ ಮುಂಬಡ್ತಿಗಳು ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಲು ಈ ಸಮಿತಿ ನಿಂತಂತೆ ಕಾಣುತ್ತದೆ. ಮೇಲ್ಕಂಡ ಶಿಫಾರಸು ನಕಾರಾತ್ಮಕವಾಗಿವೆ ಮತ್ತು ಸಂಪೂರ್ಣವಾಗಿ ಕಾರ್ಮಿಕ ವಿರೋಧಿಯಾಗಿವೆ. ಆದುದರಿಂದ ಈ ಶಿಫಾರಸುಗಳನ್ನು ಸರಕಾರವು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಾವ ನೌಕರರು ಈ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೋ ಅವರಿಗೆ ಸಮಿತಿ ವರದಿಯು ಸಂಪೂರ್ಣ ವಿರೋಧಿಯಾಗಿದೆ. ಸಾರಿಗೆ ನಿಗಮಗಳಿಗೆ 1,24,155 ಸಿಬ್ಬಂದಿಗಳು ಮಂಜೂರಾಗಿದ್ದು, ಅದರಲ್ಲಿ 1,07,000 ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಮತ್ತು 16,969 ಖಾಲಿ ಹುದ್ದೆಗಳಿವೆ ಎಂದು ತಿಳಿಸಿದೆ.

ಈಗಾಗಲೇ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿ ಹೆಚ್ಚು ಕೆಲಸದ ಹೊರೆಯಲ್ಲಿ ದುಡಿಯುವ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ಬೆನ್ನು ಹುರಿ ಬಾಗಿದೆ. ಹೆಚ್ಚಿನ ಮಂದಿ ಚಾಲಕರು, ನಿರ್ವಾಹಕರು ‘ಬಾರ್ ಡ್ಯೂಟಿ, ಡಬಲ್ ಡ್ಯೂಟಿ’ಗಳಿಂದ ಬಸವಳಿದು ಎರಡು ಮೂರು ದಿನಗಳ ಕಾಲ ಅವರ ಮನೆಗಳಿಗೇ ಹೋಗಲಾಗುತ್ತಿಲ್ಲ. ಅವರ ವಾಸ ಬಸ್‍ನಲ್ಲೇ ಆಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.

ಇನ್ನು ಮುಂದೆ ಚಾಲಕರು ಮಾತ್ರ ಇರುವ ಬಸ್‍ಗಳನ್ನು ಓಡಿಸಬೇಕೆಂಬ ಶಿಫಾರಸನ್ನು ಮಾಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಆರ್ಥಿಕ ಸುಸ್ಥಿರತೆಗೆ ಸಿಬ್ಬಂದಿ ವೆಚ್ಚ ಕಡಿಮೆ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ಈಗಿರುವ ಸಿಬ್ಬಂದಿಗಳು 35 ಸಾವಿರ ಬಸ್‍ಗಳನ್ನು ನಡೆಸಬಹುದು. ಹಾಲಿ ಇರುವ ವಾಹನಗಳ ಸಂಖ್ಯೆ 24 ಸಾವಿರ. ಇನ್ನು 5 ವರ್ಷಗಳ ಕಾಲ ನೇಮಕಾತಿ ಬೇಡ. ಸಾರಿಗೆ ನಿಗಮಗಳ ಸುಸ್ಥಿತಿಗೆ ಇಂತಹ ಮಹತ್ವದ ಸುಧಾರಣೆ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.

ಆದರೆ, ವಸ್ತುಸ್ಥಿತಿ ಬೇರೆಯೇ ಇದ್ದು, ಬಿಎಂಟಿಸಿ ಸೇರಿದಂತೆ ಎಲ್ಲ ನಿಗಮಗಳಲ್ಲೂ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇರುವುದರಿಂದ ಈಗಿರುವ ವಾಹನಗಳೆ ಸಂಪೂರ್ಣವಾಗಿ ಬೀದಿಗಿಳಿಯುತ್ತಿಲ್ಲ. ಸದರಿ ವರದಿಯಲ್ಲೇ ಈಗಲೂ 2ಸಾವಿರ ಬಸ್‍ಗಳು ರಸ್ತೆಗೆ ಬಂದಿಲ್ಲ ಎಂದು ತಿಳಿಸಲಾಗಿದೆ. ಅಂದ ಮೇಲೆ ಈಗಿರುವ ಖಾಲಿ ಹುದ್ದೆಗಳಿಗಾದರೂ ನೇಮಕಾತಿ ಮಾಡದಿದ್ದರೆ ಇನ್ನು ಮುಂದೆ ಇನ್ನೂ ಹೆಚ್ಚು ಬಸ್‍ಗಳು ಘಟಕಗಳಲ್ಲಿ ಉಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಾರ್ಯಾಗಾರಗಳಿಂದ ಘಟಕಗಳಿಗೆ ತಾಂತ್ರಿಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು. ವಾಹನಗಳ ರಿಪೇರಿಯನ್ನು ಹೊರಗುತ್ತಿಗೆ ಅಥವಾ ಗುತ್ತಿಗೆ ಕಾರ್ಮಿಕರ ಮೂಲಕ ಮಾಡಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ರದ್ದುಮಾಡಬೇಕೆಂದು ತಿಳಿಸಲಾಗಿದೆ. ಈ ಕ್ರಮಗಳಿಂದ ಈಗಿರುವ ನೌಕರರ ಮೇಲೆ ಹೆಚ್ಚಿನ ಶ್ರಮಭಾರ ಬೀಳುತ್ತದೆ ಹಾಗೂ ಕ್ರಮೇಣ ವಿಭಾಗೀಯ ಮತ್ತು ಪ್ರಾದೇಶಿಕ ಕಾರ್ಯಾಗಾರಗಳು ಅವಸಾನ ಹೊಂದುತ್ತವೆ. ಈ ಕ್ರಮಗಳು ಖಾಸಗೀಕರಣಕ್ಕೆ ಮುನ್ನುಡಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಡೀಸೆಲ್ ಬೆಲೆ ಏರಿಕೆಯಿಂದ ನಿಗಮಗಳು ತತ್ತರಿಸುತ್ತಿದ್ದು, ಆರ್‍ಟಿಸಿಗಳ ಸದ್ಯದ ಹೊಣೆಗಾರಿಕೆ 4,425 ಕೋಟಿ ರೂ.ಗಳಾಗಿದೆ. ನೌಕರರ ವೇತನ ಪರಿಷ್ಕರಣೆಯ ಬೇಡಿಕೆ ಬಾಕಿ ಇದೆ. ಆದುದರಿಂದ ಸರಕಾರವು ಈ ಕೂಡಲೇ 2ಸಾವಿರ ಕೋಟಿ ರೂ.ಗಳನ್ನು ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಬೇಕು. ಅಲ್ಲದೆ ಸಾರಿಗೆ ನಿಗಮಗಳಿಂದ ವಸೂಲು ಮಾಡುತ್ತಿರುವ ಮೋಟಾರು ವಾಹನ ತೆರಿಗೆಯನ್ನು ಸರಕಾರವು ನಿಗಮಗಳಿಗೆ ಬಂಡವಾಳವಾಗಿ ಹಿಂದಿರುಗಿಸುವಂತೆ ಶಿಫಾರಸು ಮಾಡಿದೆ.

ಆರ್‍ಟಿಸಿಗಳು ಸಾರಿಗೆ ನಿಗಮಗಳಿಗೆ ಬೆಂಬಲ ಕೊಡಲು ಸಾರ್ವಜನಿಕ ಸಾರಿಗೆ, ಹಣಕಾಸು ಮತ್ತು ಅಭಿವೃದ್ಧಿ ನಿಗಮವನ್ನು 100ಕೋಟಿ ರೂ. ಬಂಡವಾಳದೊಂದಿಗೆ ಪ್ರಾರಂಭ ಮಾಡಲು ಶಿಫಾರಸು ಮಾಡಿದೆ. ಇಂಧನದ ವೆಚ್ಚವನ್ನು ಕಡಿತಗೊಳಿಸಲು ವಿದ್ಯುತ್‍ಚಾಲಿತ ಬಸ್‍ಗಳನ್ನು ಕ್ರಮೇಣ ತೆಗೆದುಕೊಳ್ಳಬೇಕೆಂದು ಮಾಡಿರುವ ಶಿಫಾರಸುನ್ನು ನಾವು ಬೆಂಬಲಿಸುತ್ತೇವೆ ಎಂದು ಸುಬ್ಬರಾವ್ ತಿಳಿಸಿದ್ದಾರೆ.

ಸಾರಿಗೆ ನಿಗಮಗಳ ಆಸ್ತಿ (ಚರ ಮತ್ತು ಸ್ಥಿರಾಸ್ತಿಗಳ ಬೆಲೆ) 8,812 ಕೋಟಿ ರೂ.ಗಳಿದ್ದು, ಬಹುಶಃ ಇಂದಿನ ಬೆಲೆ ಎಷ್ಟಾಗಬಹುದೆಂದು ಊಹೆಗೆ ಬಿಟ್ಟಿದ್ದು. ಸಾರಿಗೆ ನಿಗಮಗಳು ತಮ್ಮ ಆಂತರಿಕ ಸಂಪನ್ಮೂಲಗಳನ್ನು ಬೆಳೆಸಿಕೊಂಡು ಅಪಾರವಾದ ಆಸ್ತಿ ಗಳಿಸಿವೆ. ಇವುಗಳಿಗೆ ಆರ್ಥಿಕ ಹಾಗೂ ಇತರೆ ರೀತಿಯ ಬೆಂಬಲ ನೀಡುವುದು ಸರಕಾರದ ಆದ್ಯ ಕರ್ತವ್ಯ. ಶ್ರೀನಿವಾಸಮೂರ್ತಿ ಸಮಿತಿ ವರದಿಯ ಬಗ್ಗೆ ಚರ್ಚಿಸಲು ಸಿಎಂ ತಮಗೆ ಸಮಯ ಕೊಡಬೇಕು ಎಂದು ಎಚ್.ವಿ.ಅನಂತಸುಬ್ಬರಾವ್ ಕೇಳಿದ್ದಾರೆ.

ಇವೆಲ್ಲವು ಸರಿ ಆದರೆ ನೌಕರರಿಗೆ ವೇತನವನ್ನು ಯಾವ ರೀತಿ ಸರ್ಕಾರ ಕೊಡಬೇಕು. ಈಗಿನ ಪರಿಸ್ಥಿತಿಯಲ್ಲಿ ನೌಕರರು ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆ ಏನು ಎಂಬುದನ್ನು ಅನಂತಸುಬ್ಬರಾವ್ ಅವರು ಏಕೆ ವಿವರಿಸಿಲ್ಲ.

ಮತ್ತು ಕಳೆದ 2020ರ ಜವರಿಯಿಂದ ವೇತನ ಹೆಚ್ಚಳ ಮಾಡಬೇಕಿದ್ದು ಈವರೆಗೂ ಈ ಬಗ್ಗೆ ಸರ್ಕಾರ ಎಲ್ಲಿಯೂ ಚಕರವೆತ್ತಿಲ್ಲ. ಈ ಬಗ್ಗೆಯೂ ಸರ್ಕಾರವನ್ನು ಈ ಅನಂತಸುಬ್ಬರಾವ್ ಅವರು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಏಕೆ ಆ ಕೆಲಸವನ್ನು ಮಾಡಿಲ್ಲ. ಇದು ಇವರ ಇಬ್ಬಗೆಯ ನೀತಿಯೇ ಎಂದು ನೌಕರರು ಕೇಳುತ್ತಿದ್ದಾರೆ.

ಇನ್ನು ಪ್ರಮುಖವಾಗಿ ಈಗಗಾಲೇ ಹಲವಾರು ನೌಕರರನ್ನು ವಜಾ ಮಾಡಲಾಗಿದೆ ಆ ಬಗ್ಗೆ ಇವರು ನೌಕರರ ಮುಖಂಡರಾಗಿ ಏಕೆ ಮಾತನಾಡಿಲ್ಲ. ಅಂದರೆ ಇವರಿಗೆಅಧಿಕಾರಿಗಳು ಮತ್ತು ಸರ್ಕಾರದ ದುರ್ನಡತೆಯಿಂದ ಬೀದಿಗೆ ಬಿದ್ದಿರುವ ನೌಕರರ ಬಗ್ಗೆ ಕಾಳಜಿ ಇಲ್ಲವೇ? ಅಂದರೆ ಇವರು ನೌಕರರ ಕಣ್ಣೊರೆಸುವ ನಾಟಕವಾಡುತ್ತಿದ್ದಾರೆ? ಎಂದು ನೌಕರರು ಆಕ್ರೋಶದಿಂದಲೇ ಅನಂತಸುಬ್ಬರಾವ್  ಅವರನ್ನು ಕೇಳುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ