ವಿಜಯಪುರ: ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಅಂದರೆ ಸರಿ ಸಮಾರು 2000ರಿಂದ ಈವರೆಗೂ ಹಲವರಿಗೆ ಪಿಂಚಣಿ ಸೌಲಭ್ಯವನ್ನೇ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ತಾಜಾ ನಿದರ್ಶನ ಎಂಬಂತೆ ವಿಜಯಪುರ ಸಾರಿಗೆ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಎಸ್.ಡಿ. ಬೂಯ್ಯರ ಅವರಿಗೆ ಬದುಕಿರುವವರೆಗೂ ಪಿಂಚಣಿ ಕೊಡಲೇ ಇಲ್ಲ. ಬೂಯ್ಯರ ಕಚೇರಿಗೆ ಅಲೆದು ಅಲೆದು ಕೊನೆಗೆ ನಿಧನರಾದರು. ಆ ಬಳಿಕ ಅವರಿಗೆ ಪತ್ನಿಗೆ ಬರಬೇಕಾದ ಪಿಂಚಣಿಯೂ ಬರಲೇ ಇಲ್ಲ.
ಇದನ್ನು ತಿಳಿದ ಬಿ.ಎನ್.ಹುಂಡೇಕಾರ ಎಂಬುವರು 2022ರಲ್ಲಿ ಈ ಸಂಬಂಧ ಎಲ್ಲ ದಾಖಲೆಗಳನ್ನು ತೆಗೆಸಿದ್ದಾರೆ. ಆ ಬಳಿಕ ಅಂದರೆ ಪ್ರಸ್ತುತ ಎಸ್.ಡಿ.ಬೂಯ್ಯರ ಅವರ ಪತ್ನಿ ಸಹೇರಾ ಸಹೈದ್ ಅಹಮದ್ ಬೂಯ್ಯರ ಅವರಿಗೆ ಪಿಂಚಣಿ ಬರುತ್ತಿದೆ. ಅಲ್ಲದೆ ಸುಮಾರು 80 ಸಾವಿರ ರೂಪಾಯಿ ಹಿಂಬಾಕಿಯನ್ನು ಪಾವತಿಸಲಾಗಿದೆ.
ಇನ್ನು ಸಹೇರಾ ಅವರಂತೆ 10-15 ಮಂದಿ ನೌಕರರು ಮತ್ತು ಅವರ ಪತ್ನಿಯರು ಕೂಡ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತಿಲ್ಲ ಅಲ್ಲಿ ಕೇಳಿ ಇಲ್ಲಿ ಕೇಳಿ ನಮ್ಮ ಬಳಿ ಬರಬೇಡಿ ಎಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಹುಂಡೇಕಾರ ಆರೋಪಿಸಿದ್ದಾರೆ.
ಇನ್ನು 2021ರಲ್ಲೇ ಸುಪ್ರೀಂ ಕೋರ್ಟ್ ಪಿಂಚಣಿ ಸಂಬಂಧ ದಾಖಲಾಗಿದ್ದ ಪ್ರಕರಣ ಒಂದಕ್ಕೆ ತೀರ್ಪು ನೀಡಿದ್ದು, ಅದರಲ್ಲಿ ಸ್ಪಷ್ಟವಾಗಿ ಹೇಳಿದೆ. ವೇತನ, ಪಿಂಚಣಿ ಸಮಯಕ್ಕೆ ಸರಿಯಾಗಿ ಪಡೆಯುವುದು ನೌಕರರ ಹಕ್ಕು. ಹೀಗಾಗಿ ಸರ್ಕಾರಿ ನೌಕರರ ವೇತನ ಪಿಂಚಣಿ ಪಾವತಿ ವಿಳಂಬವಾದರೆ ಅದಕ್ಕೆ ತಕ್ಕನಾದ ಬಡ್ಡಿಯನ್ನು ಕೂಡ ಪಾವತಿಸಬೇಕು ಎಂದು ಮಹತ್ವದ ಆದೇಶ ನೀಡಿದೆ ಸುಪ್ರೀಂ ಕೋರ್ಟ್.
ಸ್ವಲ್ಪ ಕಾಲದವರೆಗೆ ಸರ್ಕಾರದಿಂದ ಪಿಂಚಣಿ ಮತ್ತು ವೇತನ ಮುಂದೂಡಿದ್ದ ಪ್ರಕರಣದಲ್ಲಿ ಶೇ.6ರಷ್ಟು ಬಡ್ಡಿ ನೀಡುವಂತೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಆದೇಶಿಸಿತ್ತು. ಇದೇ ಪ್ರಕರಣದಲ್ಲಿ ಹೈ ಕೋರ್ಟ್ ಶೇ. 12ರಷ್ಟು ಬಡ್ಡಿಯನ್ನು ನಿಗದಿಪಡಿಸಿತ್ತು.
ಕೊರೊನಾ ಸೋಂಕಿನ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ನೌಕರರ ವೇತನ ಮತ್ತು ಪಿಂಚಣಿಯನ್ನು 2020 ರ ಮಾರ್ಚ್ ಏಪ್ರಿಲ್‌ನಲ್ಲಿ ಸ್ವಲ್ಪ ಸಮಯದವರೆಗೆ ಮುಂದೂಡಿತ್ತು. ಆ ಬಗ್ಗೆ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ತಡೆಹಿಡಿಯಲಾಗಿದ್ದ ವೇತನ ಮತ್ತು ಪಿಂಚಣಿ ಪಾವತಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ ಸಮಯಕ್ಕೆ ಸರಿಯಾಗಿ ವೇತನ ಪಿಂಚಣಿ ಪಡೆಯುವುದು ನೌಕರರ ಹಕ್ಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆದು ಸರ್ಕಾರ ಪ್ರತಿ ತಿಂಗಳ ಕೊನೆಯ ದಿನಾಂಕದಂದು ನೌಕರರಿಗೆ ವೇತನ, ಪಿಂಚಣಿ ಪಾವತಿಸಬೇಕು ಎಂದು ಹೈ ಕೋರ್ಟ್ ಆದೇಶ ನೀಡಿತ್ತು. ಇನ್ನು ಇಲಾಖೆ ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೌಕರರ ತಪ್ಪಿತಸ್ಥರಾಗಿದ್ದರೆ ಅಂಥವರಿಗೆ ಪಿಂಚಣಿ ನಿಲ್ಲಿಸಬಹುದಾಗಿದೆ ಎಂದು ತಿಳಿಸಿ, ಈಗ ತಡೆ ಹಿಡಿದಿರುವ ಪಿಂಚಣಿಗೆ ಶೇ. 12ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕೆಂದು ಹೈಕೋರ್ಟ್ ಆದೇಶಿಸಿತ್ತು.
ಈ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಆಂಧ್ರ ಪ್ರದೇಶ ಸರ್ಕಾರ ಪ್ರಶ್ನಿಸಿ, ಕೊರೊನಾ ಸಂಕಷ್ಟದಿಂದ ನೌಕರರ ವೇತನ, ಪಿಂಚಣಿ ಮುಂದೂಡಲಾಗಿದೆ ಎಂದು ತಿಳಿಸಿತ್ತು. ಉತ್ತಮ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಸರಕಾರ ಹೇಳಿತ್ತು. ಆದರೆ ಇದನ್ನು ಒಪ್ಪದ ಸುಪ್ರೀಂಕೋರ್ಟ್ ವೇತನ ಮತ್ತು ಪಿಂಚಣಿ ವಿಳಂಬವಾದ ಕಾರಣ ಶೇ. 6ರಷ್ಟು ಬಡ್ಡಿ ಪಾವತಿಸುವಂತೆ 2021ರ ಫೆಬ್ರವರಿಯಲ್ಲಿ ಆದೇಶಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ.