ಬೆಳಗಾವಿ: ಸಾರಿಗೆ ನೌಕರರಿಗೆ ಲಿಖಿತರೂಪದಲ್ಲಿ ಕೊಟ್ಟ ಭರವಸೆ ಈಡೇರಿಸದೆ ನೌಕರರ ಶಾಪಕ್ಕೆ ಗುರಿಯಾಗಿದ್ದ ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸವದಿ, ಸುದ್ದಿಗೋಷ್ಠಿ ನಡೆಸಿದ್ದು, ಖಂಡಿತವಾಗಿಯೂ ತೀರ್ಮಾನ ಮಾಡಿದ್ದೇನೆ. ಭಿಕ್ಷೆ ಪಾತ್ರೆ ಇಟ್ಟುಕೊಂಡು ತಿರುಗುವವನು ನಾನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರದ ಅಮಲಿನಲ್ಲಿ ನಾನಿಲ್ಲ. ಜಿಲ್ಲೆಯಲ್ಲಿ ಯಾರು ಬೆನ್ನಿಗೆ ಚೂರಿ ಹಾಕಿಲ್ಲ ಎಂದು ರಮೇಶ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
ಇನ್ನು ಕೊನೆ ಗಳಿಗೆವರೆಗೂ ನಿನ್ನ ಜತೆ ಇದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದರು. ನನ್ನ ಜತೆಗೆ ಇದ್ದಾರೆ ಎಂದು ಭಾವಿಸಿದ್ದೆ. ಬಿಜೆಪಿ ಮುಖಂಡರು ನಿಷ್ಠಾವಂತ ಕಾರ್ಯಕರ್ತ. ಪಕ್ಷವನ್ನು ತಾಯಿಯ ಸ್ಥಾನದಲ್ಲಿ ಇಟ್ಟಿದ್ದೆ, ವಿಷ ಕೊಡುವುದಿಲ್ಲ ಎಂದಿದ್ದೆ. ಆದರೆ ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಎನ್ನುವ ಭಾವನೆ ಬರುತ್ತಿದೆ. ಅವತ್ತಿನ ಬಿಜೆಪಿ ಇಂದಿನ ಬಿಜೆಪಿಗೆ ಬಹಳ ವ್ಯತ್ಯಾಸ ಇದೆ. ತತ್ವ ಸಿದ್ಧಾಂತಗಳು ಬಿಜೆಪಿಯಲ್ಲಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದಲ್ಲಿ ನಿಷ್ಠಾವಂತರನ್ನು ದೂರ ಮಾಡುವ ಕೆಲಸ ಆರಂಭವಾಗಿದೆ. ಇದು ಪಕ್ಷದ ದೂರ ದೃಷ್ಟಿ ಇರಬಹದು ಎಂದು ನನ್ನ ಅನಿಸಿಕೆಯಾಗಿದೆ. ಭಾರತೀಯ ಜನತಾ ಪಕ್ಷದ ನಾಯಕರಿಗೆ 20 ವರ್ಷಗಳ ಕಾಲ ಸಹಕಾರ ಆಶ್ರಯ ನೀಡಿದ್ದಕ್ಕೆ, ಪ್ರಧಾನಿ ಅವರಿಂದ ಹಿಡಿದು ಸಿಪಾಯಿವರೆಗೆ ಎಲ್ಲರೂ ಗೌರವದಿಂದ ನಡೆದುಕೊಂಡಿದ್ದಾರೆ. ನಿಮ್ಮ ಸಹಕಾರಕ್ಕೆ ಋಣಿಯಾಗಿರುತ್ತೇನೆ ಎಂದರು.
ಬೊಮ್ಮಾಯಿ ಈ ಹಿಂದೆ ಕಾಂಗ್ರೆಸ್ ಸೇರುವುದಕ್ಕೂ ಮುಂದಾಗಿದ್ದರು. ಸಿ.ಸಿ. ಪಾಟೀಲ್, ನಾನು ವಿನಂತಿ ಮಾಡಿ ಬಿಜೆಪಿಗೆ ಕರೆ ತಂದಿದ್ದೇವು. ನಮ್ಮ ವಿನಂತಿಗೆ ಅವರು ಬಿಜೆಪಿಗೆ ಬಂದಿದ್ದರು. ಆದರೆ ಅವರಿಗೆ ಎರಡನೇ ಬಾರಿಗೆ ಸಿಎಂ ಆಗುವ ಸೌಭಾಗ್ಯವಿಲ್ಲ. ಪ್ರಧಾನಿ ಆಗುವ ಯೋಗ ಅವರಿಗಿದೆ. ಬೊಮ್ಮಾಯಿ ಅವರಿಗೆ ಪ್ರಧಾನಿ ಆಗುವ ಶಕ್ತಿ ಭಗವಂತ ಕೊಡಲಿ. ಬೊಮ್ಮಾಯಿ ಅವರಿಗೆ ಪಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.