ಬೆಳಗಾವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು ಕಳೆದ 2021ರ ಏಪ್ರಿಲ್‌ನಲ್ಲಿ ಮಾಡಿದ ಮುಷ್ಕರದ ವೇಳೆ ವಜಾಗೊಳಿಸಿರುವ ನೌಕರರ ಮರು ನೇಮಕ ಮಾಡಿಕೊಳ್ಳುವುದು ಸೇರಿದಂತೆ ನೌಕರರಿಗೆ ಸಂಬಂಧಪಟ್ಟ ಹಲವಾರು ವಿಚಾರ ಕುರಿತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಜತೆ ಬಿಸಿಬಿಸಿ ಚರ್ಚೆ ನಡೆಯಿತು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಮಧ್ಯಾಹ್ನ ಆಯೋಜಿಸಿದ್ದ 2022-23ನೇ ಸಾಲಿನ ಆಯ-ವ್ಯಯ ಘೋಷಣೆ- ನೂತನ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಹಾಗೂ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.
ಇಲಾಖೆಯ ಸುಧಾರಣೆ, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ, ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸರಿಯಾಗಿ ಬಸ್ ಒದಗಿಸುವುದು, ಗ್ರಾಮೀಣ ಭಾಗಗಳಲ್ಲಿ ಪರೀಕ್ಷಾ ವೇಳೆ ಬಸ್ ಒದಗಿಸುವುದು ಸೇರಿದಂತೆ ಕೆಲವು ಸುಧಾರಣಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿದ್ದ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿದೇರ್ಶಕರು, ವಿವಿಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ಸಚಿವರು ನೀಡಿದರು.
![](https://vijayapatha.in/wp-content/uploads/2022/12/29-Dec-Sriramulu-300x175.jpg)
ಈ ಎಲ್ಲವುಗಳ ಜತೆಗೆ ಸಭೆಯಲ್ಲಿ ಸಾರಿಗೆ ನೌಕರರ ವಿಚಾರವು ಪ್ರಸ್ತಾಪಗೊಂಡಿದ್ದು, ಈ ವೇಳೆ ನೌಕರರ ಮೂಗಿಗೆ ತುಪ್ಪ ಸವರಿ ಬಿಟ್ಟರೆ ಸಾಕು ಎಂಬಂತೆ ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವೇತನ ಹೆಚ್ಚಳ ಮಾಡುವ ಸಂಬಂಧ ಕೆಲವು ತೀರ್ಮಾನಕ್ಕೆ ಬರಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಅವುಗಳಲ್ಲಿ ಪ್ರಮುಖವಾಗಿ ವಜಾಗೊಂಡ ನೌಕರರ ಪುನರ್ ನೇಮಕ ಮಾಡಿಕೊಳ್ಳುವುದು ಮತ್ತು ಸರ್ವಿಸ್ ಕಂಟಿನ್ಯೂಟಿ ನೀಡುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು ಸಾಧಕ ಬಾಧಕಗಳನ್ನು ಶೀಘ್ರದಲ್ಲಿ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಈಗಾಗಲೇ ಜಂಟಿ ಮೆಮೋ ಆಧಾರದಲ್ಲಿ ಕರ್ತವ್ಯಕ್ಕೆ ಹಾಜರಾಗಿರುವವರು ಮತ್ತು ಈಗ ಹಾಜರಾಗಲು ಸಿದ್ದಿದವಿರುವವರು ಜಂಟಿ ಮೆಮೋ ಆಧಾರದ ಮೇಲೆ ಕೆಲಸಕ್ಕೆ ಬರುವ ಎಲ್ಲ ನೌಕರರ ಇಂಕ್ರಿಮೆಂಟ್ ವಾಪಸ್ ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರಬರೆದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಮಸ್ಯೆ ಬಗೆಹರಿಸಲು ತಿರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇವುಗಳ ಜತೆಗೆ ಮುಷ್ಕರದ ಸಂದರ್ಭದಲ್ಲಿ ನೌಕರರು ಮತ್ತು ಕುಟುಂಬಸ್ಥರ ವಿರುದ್ಧ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳಿಗೆ ಪತ್ರಬರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಹಿಂದೆ ಹಲವಾರು ಬಾರಿ ಸಭೆ ನಡೆಸಿದಾಗ ತೆಗೆದುಕೊಂಡ ತೀರ್ಮಾನದಂತೆಯೇ ಇಂದು ಕೂಡ ನೌಕರರ ವೇತನ ಸಂಬಂಧ ಮುಖ್ಯಮಂತ್ರಿಗಳ ಜತೆ ಆದಷ್ಟೂ ಬೇಗ ಮಾತನಾಡಲು ಮತ್ತು ಮೇಲ್ಕಂಡ ವಿಷಯಗಳ ಸಮಸ್ಯೆ ಪರಿಹಾರದ ಬಗ್ಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲು ತಿರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಹತ್ತಾರು ವರ್ಷಗಳಿಂದ ಈವರೆಗೂ ನಡೆಯದೆ ನೌಕರರ ಅತಂತ್ರ ಸ್ಥಿತಿಗೆ ಕಾರಣವಾಗಿರುವ ಕಾರ್ಮಿಕ ಸಂಘಟನೆಗಳ ಚುನಾವಣಾ ವಿಚಾರವಾಗಿ ಈಗ ಮಾತನಾಡುವುದು ಬೇಡ ಮೊದಲು ಈ ಮೇಲಿನ ಎಲ್ಲ ಸಮಸ್ಯೆಗಳ ಪರಿಹಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳವುದು ಪ್ರಮುಖವಾಗಿದೆ. ಇದೆಲ್ಲವು ಬಗೆಹರಿದ ನಂತರ ಚುನಾವಣೆ ಬಗ್ಗೆ ಕ್ರಮವಹಿಸೋಣ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)