ಬೆಳಗಾವಿ: ರಾಜ್ಯವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಬೆನ್ನಲ್ಲೆ ಅಸಮಾಧಾನಿತರ ಸಂಖ್ಯೆ ಹೆಚ್ಚುತ್ತಿದ್ದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ನೆಹರೂ ಓಲೇಕಾರ್, ಎಂ.ಪಿ ಕುಮಾರಸ್ವಾಮಿ ಬಳಿಕ ಇದೀಗ ಮತ್ತೊಬ್ಬ ಶಾಸಕ ಬಿಜೆಪಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.
ಜಿಲ್ಲೆಯ ರಾಮದುರ್ಗ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ತೊರೆದು ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದುರ್ಗ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿದೆ. ಬೆಂಬಲಿಗೆರ ಸಲಹೆ ಮೇರೆಗೆ ಬಿಜೆಪಿ ತೊರೆಯಲು ನಿರ್ಧಾರ ಮಾಡಿದ್ದೇನೆ ಎಂದರು.
ಇನ್ನು ನಾನು ಯಾವುದೆ ಅನ್ಯ ಪಕ್ಷಕ್ಕೆ ಸೇರುವುದಿಲ್ಲ, ಪಕ್ಷೇತರರಾಗಿ ನಿಲ್ಲಲು ತೀರ್ಮಾನಿಸಿದ್ದೇನೆ. ಬಿಎಸ್‌ವೈ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಈಗ ಬೆಂಗಳೂರು ಮೂಲದ ಚಿಕ್ಕರೇವಣ್ಣಗೆ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ನಿಂದ ಬಂದ ಚಿಕ್ಕರೇವಣ್ಣಗೆ ಟಿಕೆಟ್ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಸಮಾವೇಶದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ನಮ್ಮ ಕಾರ್ಯಕರ್ತರಿಗೆ ಮೋಸ ಮಾಡಿದೆ. ನನ್ನ ಬದಲು ಸ್ಥಳೀಯರಿಗೆ ಟಿಕೆಟ್ ನೀಡಿದ್ದರೇ ಸಮಾಧಾನವಿತ್ತು ಎಂದು ಬೇಸರ ವ್ಯಕ್ತಪಡಿಸಿದರು.