ಮಂಡ್ಯ: ದೇಶಾದ್ಯಂತ ಲಾಕ್‌ಡೌನ್ ಮತ್ತಷ್ಟು ಬಿಗಿಗೊಳ್ಳುತ್ತಿದೆ ಆದರೆ ಮಂಡ್ಯದಲ್ಲಿ ಯಾವುದೇ ಕೊರೊನಾ ಪೀಡಿತರು ಪತ್ತೆಯಾಗಿಲ್ಲ ಎಂಬ ಒಂದೇ ಒಂದು ಕಾರಣವನ್ನಿಟ್ಟುಕೊಂಡು ಲಾಕ್‌ಡೌನ್ ಸಡಿಲಗೊಳಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆಲೋಚಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ ಎಂದು ಮಂಡ್ಯ ಜಿಲ್ಲಾಡಳಿತ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲು ಮುಂದಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಿ ಶನಿವಾರಂದಿ ಬೇಕರಿ, ಸಲೂನ್ ತೆರೆಯಲು ಅನುಮತಿಯನ್ನೂ ನೀಡಿದೆ.
ಒಂದಷ್ಟು ಸಲಹೆಗಳನ್ನು ನೀಡಿದ್ದು, ಬೇಕರಿಯಲ್ಲಿ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಬಳಸುವುದು ಕಡ್ಡಾಯ ಎಂದು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾಂಸ ಮಾರಾಟದ ಮೇಲಿದ್ದ ನಿರ್ಬಂಧವನ್ನು ನಿನ್ನೆಯಿಂದ ಸಡಿಲಿಸಿ ಕೋಳಿ, ಕುರಿ, ಮೇಕೆ, ಮೀನು ಮಾಂಸ ಮಾರಾಟ ನಡೆಸಲಾಗುತ್ತಿದೆ.
ಇದೀಗ ಬೇಕರಿ ಹಾಗೂ ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಜಿಲ್ಲಾಡಳಿತದ ಈ ಕ್ರಮ ಜನರಲ್ಲಿ ಆತಂಕ ಮೂಡಿಸಿದೆ. ಮೈಸೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುತ್ತಿದೆ. ಇಂಥ ವೇಳೆಯಲ್ಲಿ ಮೈಸೂರಿನ ಪಕ್ಕದ ಜಿಲ್ಲೆಯಲ್ಲಿ ಸಲೂನ್, ಬೇಕರಿ ತೆರೆಯಲು ಅನುಮತಿ ಕೊಟ್ಟಿರುವುದು ಭಯದ ವಾತಾವರಣಕ್ಕೂ ಎಡೆಮಾಡಿಕೊಟ್ಟಿದೆ.
ಈ ನಿಯಮ ಸಡಿಲಿಕೆಯಿಂದ ಜನ ಗುಂಪಾಗಿ ಸೇರುವ ಸಾಧ್ಯತೆಯೇ ಹೆಚ್ಚಿದ್ದು, ಮುಂಜಾಗ್ರತೆ ವಹಿಸದಿದ್ದರೆ ಸೋಂಕಿನಿಂದ ಪಾರಾಗುವುದು ಕಷ್ಟ ಎಂಬುದನ್ನು ಜಿಲ್ಲಾಡಳಿತ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು ಎಂಬುವುದು ಪ್ರಜ್ಞಾನವಂತರ ಅಭಿಪ್ರಾಯವಾಗಿದೆ.