ಮೈಸೂರು: ಕುವೆಂಪು ನಗರದಲ್ಲಿರುವ ಚೇತನ ನ್ಯಾಯಬೆಲೆ ಅಂಗಡಿ, ಎನ್.ಆರ್.ಮೊಹಲ್ಲದಲ್ಲಿರುವ ಗಾಂಧಿನಗರ ಸಿ.ಸಿ.ಎಸ್ ನ್ಯಾಯಬೆಲೆ ಅಂಗಡಿ, ಚಾಮರಾಜ ಮೊಹಲ್ಲದ ಟಿ.ಕೆ.ಲೇಔಟ್‍ನಲ್ಲಿರುವ ಶ್ರೀಲಕ್ಷ್ಮೀ ನ್ಯಾಯಬೆಲೆ ಅಂಗಡಿಗಳನ್ನು ಅಮಾನತಿನಲ್ಲಿಟ್ಟು ವಿಚಾರಣೆಗೆ ಕ್ರಮವಹಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 7 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಂಬಂಧ ಲಾಕ್‍ಡೌನ್ ಆಗಿರುವ ಕಾರಣ ಪಡಿತರ ಚೀಟಿದಾರರ ಆಹಾರ ಭದ್ರತೆಗೆ ದಕ್ಕೆಯಾಗದಂತೆ ಕ್ರಮವಹಿಸುವ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ-ಏಪ್ರಿಲ್ ಮಾಹೆಯಲ್ಲಿ ಒಂದೇ ಬಾರಿಗೆ ವಿತರಣೆ ಮಾಡಲು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಹಂಚುವಂತೆ ಮತ್ತು ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಣೆಯಲ್ಲಿ ಯಾವುದೇ ಲೋಪದೋಷವಾಗದಂತೆ ಕ್ರಮವಹಿಸಲು ಸೂಚಿಸಲಾಗಿತ್ತು.
ಈ ಕ್ರಮಗಳ ಬಗ್ಗೆ ಜಿಲ್ಲೆಯ ಕಾರ್ಯನಿರ್ವಾಹಕ ಸಿಬ್ಬಂದಿ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಲೋಪದೋಷಗಳು ಕಂಡು ಬಂದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಕ್ತಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗದಂತೆ ಮತ್ತು ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟವಾಗದಂತೆ ನೋಡಿಕೊಳ್ಳುವ ಸಲುವಾಗಿ ಮುಕ್ತ ಮಾರುಕಟ್ಟೆಯ ಸಗಟು ಮತ್ತು ಚಿಲ್ಲರೆ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ದರಫಲಕ ನಿರ್ವಹಿರುವುದು, ಲೆಕ್ಕಪತ್ರ ನಿರ್ವಹಣೆ ಮಾಡಿರುವುದಿಲ್ಲ ಮತ್ತು ವಹಿವಾಟಿನ ಬಗ್ಗೆ ಸರಿಯಾದ ಬಿಲ್ಲುಗಳನ್ನು ನಿರ್ವಹಿಸಿರುವುದಿಲ್ಲದ ಕಾರಣ ಬಂಡಿಪಾಳ್ಯದ ಎ.ಪಿ.ಎಂ.ಸಿ ಯಾರ್ಡ್‍ನ ಆಕಳು ಟ್ರೇಡರ್ಸ್ ಹಾಗೂ ಮುರಾರಿ ಟ್ರೇಡರ್ಸ್ ವಿರುದ್ಧ ತನಿಖೆ ನಡೆಸಿ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.