ಚಾಮರಾಜನಗರ: ಕೊರೊನಾ ವೈರಸ್ ಹರಡುವಿಕೆ ತಡೆಯುವ ಕ್ರಮವಾಗಿ ಜಾರಿಯಲ್ಲಿರುವ ದಿಗ್ಭಂಧನ (ಲಾಕ್‍ಡೌನ್) ದಿಂದಾಗಿ ಜಿಲ್ಲೆಯಲ್ಲೇ ಉಳಿದುಕೊಂಡಿರುವ ಹೊರಜಿಲ್ಲೆ, ಹೊರರಾಜ್ಯದ ಕೃಷಿ, ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಆಹಾರ, ಆಶ್ರಯ ನೀಡಲು ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಕೋವಿಡ್-19ರ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾಗಿರುವ ಅನುಷ್ಠಾನ ಕ್ರಮಗಳ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿಗ್ಬಂಧನ ಕಾರಣದಿಂದ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ಹೀಗಾಗಿ ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಚಾಮರಾಜನಗರ ಜಿಲ್ಲೆಗೆ ಕೃಷಿ ಇನ್ನಿತರ ಉದ್ಯಮ ವಲಯಗಳಲ್ಲಿ ಕೂಲಿಗಾಗಿ ಬಂದಿದ್ದ ಕಾರ್ಮಿಕರು ಜಿಲ್ಲೆಯಲ್ಲಿಯೇ ಉಳಿಯುವಂತಾಗಿದೆ. ವಲಸೆ ಕಾರ್ಮಿಕರಿಗೂ ನೆರವಾಗಬೇಕಿದೆ. ಈ ಎಲ್ಲ ಜನರಿಗೆ ಆಹಾರ, ಆಶ್ರಯ ನೀಡುವುದು ತುರ್ತು ಅಗತ್ಯವಾಗಿದೆ. ಇಂತಹ ಜನರು ಎಲ್ಲಿಯೇ ಕಂಡುಬಂದರೂ ಕೂಡಲೇ ಅವರ ನೆರವಿಗೆ ತಹಶೀಲ್ದಾರ್ ಸೇರಿದಂತೆ ಆಯಾ ಭಾಗದ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಹೊರಭಾಗದಿಂದ ಬಂದು ಅನಿವಾರ್ಯವಾಗಿ ಇಲ್ಲಯೇ ಉಳಿದುಕೊಳ್ಳಬೇಕಿರುವ ಕೃಷಿ ಕೂಲಿ ಕಾರ್ಮಿಕರಿಗೆ, ವಲಸೆ ಬಂದಿರುವ ಕಾರ್ಮಿಕರಿಗೆ ಆಯಾ ವ್ಯಾಪ್ತಿಯಲ್ಲಿರುವ ಸಮುದಾಯ ಭವನ, ಶಾಲೆಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಬೇಕು. ಆರೋಗ್ಯ ತಪಾಸಣೆ ಮಾಡಿಸಬೇಕು. ಸ್ವಚ್ಚತೆಗೆ ಮಾರ್ಗದರ್ಶನ ಮಾಡಬೇಕು. ನೀರು, ಶೌಚಾಲಯ ಇರುವ ಕಡೆ ಉಳಿಯಲು ವ್ಯವಸ್ಥೆ ಮಾಡಬೇಕು. ಆಹಾರ ವಿತರಣೆಯು ನಡೆಯಬೇಕು. ಅವರೇ ಆಹಾರ ತಯಾರಿಸಿಕೊಳ್ಳಲು ಸಾಧ್ಯವಿದ್ದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯು ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಇತರೆ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಯಾವುದಾದರೂ ಕೊರತೆ ಇದ್ದಲ್ಲಿ ಮೊದಲೇ ಪಟ್ಟಿ ಮಾಡಿಕೊಂಡು ತರಿಸಿಕೊಳ್ಳುವ ಸಿದ್ದತೆ ಪ್ರಕ್ರಿಯೆ ಮಾಡಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಿರುವ ತರಕಾರಿ,ಹಣ್ಣು ಮಾರಾಟ ಸೇವೆ ವ್ಯಾಪಕವಾಗಿ ಎಲ್ಲೆಡೆ ಲಭ್ಯವಾಗಲು ಮತ್ತಷ್ಟು ಕ್ರಮಗಳಿಗೆ ಸಿದ್ದರಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಸ್ವಚ್ಚತೆ ಕಾಪಾಡಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ ಸಂಬಂಧ ಯಾವುದೇ ಮಾಹಿತಿ, ಮನವಿ, ನೆರವು, ಸಮಸ್ಯೆ ಆಲಿಕೆಗೆ ಜಿಲ್ಲಾಕೇಂದ್ರದಲ್ಲಿ ತೆರೆಯಲಾಗಿರುವ ಉಚಿತ ಸಹಾಯವಾಣಿ ಸಂಖ್ಯೆ 1077 ಹಾಗೂ 08226-223160 ಗೆ ನಾಗರಿಕರು ಕರೆ ಮಾಡಬಹುದು. ಈ ಬಗ್ಗೆ ಅಧಿಕಾರಿಗಳು ತಮ್ಮ ಕಚೇರಿ ಹಾಗೂ ಸಾಧ್ಯವಿರುವ ಎಲ್ಲಾ ಕಡೆ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ ಉಪಸ್ಥಿತರಿದ್ದರು.