ಹಾಸನ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ ಅಗತ್ಯವಿರುವ ಆಲೂಗಡ್ಡೆ ಹಾಗೂ ಇತರ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಸಾಕಷ್ಟು ದಾಸ್ತಾನು ಇದ್ದು ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೃಷಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಅಡಚಣೆ ಇಲ್ಲ. ಯಾರಾದರು ಅಡ್ಡಿಪಡಿಸಿದರೆ ಅದನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು.
ಹಾಸನದಲ್ಲಿ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇದ್ದು ಈ ಬಗ್ಗೆ ಶಾಸಕರು ಕೂಡ ಮನವಿ ಮಾಡಿದ್ದಾರೆ, ಅದರಂತೆ ಸೂಕ್ತ ಜಾಗ ಗುರುತಿಸಿ ಪ್ರಸ್ಥಾವನೆ ಸಲ್ಲಿಸಿದ್ದಾರೆ ಎ.ಪಿ.ಎಂ.ಸಿ.ಯಲ್ಲಿ ಶೈಥ್ಯಾಗಾರ ಸ್ಥಾಪನೆಗೆ ಅಗತ್ಯ ಸೌಲಭ್ಯ ಮಾಡಿಸಿಕೊಡಲಾಗುತ್ತದೆ ಎಂದು ಸಚಿವರು ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೇಕಾಗಿರುವ ಸವಲತ್ತುಗಳನ್ನು ಇಲಾಖೆ ವತಿಯಿಂದ ಒದಗಿಸಲಾಗುತ್ತದೆ ಹಾಗೂ ಹಣಕಾಸಿನ ಸಮಸ್ಯೆ ಇದ್ದರೆ ಅದನ್ನೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ ಚಟುವಟಿಕೆಗಳಿಗೆ ಬೇಕಾದ ಸಲಕರಣೆಗಳು ಹಾಗೂ ದಿನಸಿ ಮತ್ತು ತರಕಾರಿಗಳನ್ನು ವರ್ತಕರುಗಳು ಕಡಿಮೆ ಬೆಲೆಗೆ ಕೊಂಡುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೋಮಶೇಖರ್ ಹೇಳಿದರು.
ರೈತರು ಬೆಳೆದ ತರಕಾರಿ ಹಣ್ಣುಗಳನ್ನು ಎ.ಪಿ.ಎಂ.ಸಿ.ಗೆ ಸಾಗಿಸುವಾಗ ಚೆಕ್ ಪೋಸ್ಟ್ಗಳಲ್ಲಿ ಯಾವುದಾದರು ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳು ಹೈಪವರ್ ಕಮಿಟಿ ರಚನೆ ಮಾಡಿದ್ದು ರೈತರು ಬೆಳೆದ ತರಕಾರಿಗಳನ್ನು ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಬೇಕಾದರೂ ಮಾರಬಹುದು ಎಂದು ತಿಳಿಸಿದ್ದಾರೆ. ಹಲವಾರು ಕಡೆ ರೈತರು ಸಾಗಾಣೆ ಮಾಡಲಾಗುತ್ತಿಲ್ಲ, ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದರೆ ನಷ್ಟವಾಗುತ್ತಿದೆ ಎಂದು ಹಿಂಜರಿಯುತ್ತಿದ್ದಾರೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು ಎಂದರು.
ಶಾಸಕ ಪ್ರೀತಂ ಜೆ ಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರಿನಿವಾಸ್ ಗೌಡ, ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್ ಮತ್ತಿತರರು ಇದ್ದರು.