ಬೆಂಗಳೂರು: ನೇಕಾರರಿಗೆ ನೇಕಾರಿಕೆ ಉದ್ದೇಶಕ್ಕಾಗಿ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು , ರಾಷ್ಟ್ರೀಕೃತ ಬ್ಯಾಂಕುಗಳಿಂದ ನೀಡಲಾದ ಸಾಲದ ಕುರಿತಾಗಿ ಜಿಲ್ಲಾವಾರು ಮಾಹಿತಿ ಪಡೆದು ಸಾಲಮನ್ನಾ ಮಾಡಲು ಸರ್ಕಾರ ಕ್ರವಹಿಸಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಎಚ್.ಎಂ. ರೇವಣ್ಣ (ವಿಧಾನ ಸಭೆಯಿಂದ ಚುನಾಯಿತರಾದವರು) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2019-20ನೇ ಸಾಲಿಗೆ ಸರ್ಕಾರದಿಂದ ನೇಕಾರರ ಸಾಲದ ಮೇಲೆ 227.86 ಲಕ್ಷ ರೂ.ಗಳ ಬಡ್ಡಿ ಮನ್ನಾ ಮಾಡಲಾಗಿದೆ. 9765 ಫಲಾನುಭವಿಗಳಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಅನುಕೂಲವಾಗಿದೆ ಎಂದು ತಿಳಿಸಿದರು.
ಜವಳಿ ಉದ್ಯಮವನ್ನು ಉತ್ತೇಜಿಸುವ ಸಂಬಂಧ ಬೇರೆ ಬೇರೆ ರಾಜ್ಯಗಳು ರೂಪಿಸಿಕೊಂಡಿರುವ ಜವಳಿ ನೀತಿಯನ್ನು ಅಧ್ಯಯನ ಮಾಡಿ ಹೊಸ ಟೆಕ್ಸ್‍ಟೈಲ್ ಪಾಲಿಸಿ ಜಾರಿಗೆ ತರಲಾಗುವುದು. ಜವಳಿ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆ ಮಾಡಲು ಕ್ರಮ ವಹಿಸಲಾಗುವುದು. ಜವಳಿ ಉದ್ಯಮದ ಮೇಲೆ ಹೂಡಿಕೆ ಮಾಡಿದ ಬಂಡವಾಳದ ಮೇಲೆ ಶೇಕಡ 30 ರಷ್ಟು ಸಹಾಯಧನ ನೀಡಲು ಕ್ರಮವಹಿಸಲಾಗುವುದು ಅಲ್ಲದೆ ನೇಕಾರರಿಗೆ ಪ್ರತಿ ತಿಂಗಳು ಒಂದು ಸಾವಿರದಂತೆ 5ವರ್ಷ ನೀಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.