ಧಾರವಾಡ: ಕೊರೊನಾ ವೈರಸ್ ತಡೆಯಲು ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಆಡಳಿತದ ವಿವಿಧ ಅಗತ್ಯ ಸೇವೆಯಲ್ಲಿರುವ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಅವಶ್ಯವಾಗಿರುವ ಸ್ಯಾನಿಟೈಸರ್, ಮಾಸ್ಕ್‍ಗಳನ್ನು ಒದಗಿಸಬೇಕು. ಕರ್ತವ್ಯ ನಿರತ ಪೊಲೀಸರಿಗೆ ಸಕಾಲಕ್ಕೆ ಊಟ, ಉಪಾಹಾರ ಲಭ್ಯವಾಗಬೇಕು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಕೊರೊನಾ ನಿಯಂತ್ರಣ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೊನಾ ನಿಯಂತ್ರಣಕ್ಕೆ ವೈದ್ಯರು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿ ಹಗಲಿರಳು ಶ್ರಮಿಸುತ್ತಿದ್ದಾರೆ. ಪೊಲೀಸರು, ಪೌರಕಾರ್ಮಿಕರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಹಾಗೂ ಊಟೋಪಚಾರದ ವ್ಯವಸ್ಥೆಯಾಗಬೇಕು ಎಂದರು.
ಬೇರೆ ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರಿಗೆ ಜಿಲ್ಲೆಯಲ್ಲಿ ವಸತಿ, ಊಟದ ವ್ಯವಸ್ಥೆ ದೊರೆಯಬೇಕು. ಅಸಂಘಟಿತ ವಲಯದ ಕಾರ್ಮಿಕರು ಉಪವಾಸದಿಂದ ಬಳಲಬಾರದು. ವೃದ್ಧಾಪ್ಯ, ವಿಧವಾ, ವಿಕಲಚೇತನ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಮುಂಚಿತವಾಗಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಕಿಮ್ಸ್‍ನಲ್ಲಿ ಕೊರೊನಾ ಗಂಟಲು ದ್ರವದ ಮಾದರಿ ಪರೀಕ್ಷೆಯ ಪ್ರಯೋಗಾಲಯ ಸ್ಥಾಪನೆ ಕಾರ್ಯ ಶೀಘ್ರ ಅನುಷ್ಠಾನಗೊಳ್ಳಲು ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಪ್ರಯತ್ನಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಕೊರೊನಾ ಶಂಕಿತ ವ್ಯಕ್ತಿಗಳನ್ನು ಅವರ ಮನೆಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕಿಂತ ಸರ್ಕಾರಿ ಕ್ವಾರಂಟೈನ್ ಮಾಡಲು ಕಟ್ಟಡಗಳನ್ನು ಗುರುತಿಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಸರಕು ಸೇವೆಗಳ ಪೂರೈಕೆ ಮಾಡುವ ಲಾರಿಗಳ ಸಂಚಾರಕ್ಕೆ ಸರ್ಕಾರಅನುಮತಿ ನೀಡಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಮಾತನಾಡಿ, ಕರ್ತವ್ಯ ನಿರತ ಪೊಲೀಸರಿಗೆ ಊಟ, ಉಪಾಹಾರ ಸಿಗುತ್ತಿದೆ. ವೈಯಕ್ತಿಕವಾಗಿಯೂ ಅವರ ಕಾಳಜಿ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಅನಗತ್ಯವಾಗಿ ಸಂಚರಿಸುತ್ತಿದ್ದ 400 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದಿನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಪುರುಷೋತ್ತಮ, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಸಂತೋಷ ಬಿರಾದಾರ, ಪ್ರಕಾಶ ನಾಶಿ, ಅಮರೇಶ ಪಮ್ಮಾರ ಮತ್ತಿತರರು ಇದ್ದರು.