ಬೇಲೂರು: ಇಡಿ ಜಗತ್ತನ್ನೆ ಬೆಚ್ಚಿಬೀಳಿಸುತ್ತಿರುವ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ 900 ವರ್ಷಗಳ ಇತಿಹಾಸವಿರುವ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ಬಾಗಿಲನ್ನು ಮಂಗಳವಾರ (ಮಾ.17)ದಿಂದ ಮಾ.31ರ ವರೆಗೆ ಮುಚ್ಚಲಾಗಿದೆ.
ಕೇಂದ್ರ ಸರಕಾರದ ಆದೇಶದಂತೆ ಕೇಂದ್ರಪುರಾತತ್ವ ಇಲಾಖೆ ಅಧಿಕಾರಿಗಳು ದೇಗುಲದ ದ್ವಾರಗೋಪುರದ ಬಾಗಿಲನ್ನು ಮುಚ್ಚಿದರು. ಬೆಳಗ್ಗೆ ಅರ್ಚಕರು ದೇಗುಲಕ್ಕೆ ಆಗಮಿಸುವ ವೇಳೆಗೆ ಬಾಗಿಲು ಮುಚ್ಚಲ್ಪಟ್ಟಿತ್ತಾದರೂ ಪೂಜಾಕಾರ್ಯ ನಿಮಿತ್ತ ನಂತರ ಭಾಗಶಃ ತೆರೆಯಲಾಯಿತು. ಅರ್ಚಕರು ಎಂದಿನಂತೆ ದೇವರಿಗೆ ಪೂಜೆ ಸಲ್ಲಿಸಿದರು. ಆದರೆ ಪ್ರವಾಸಿಗರಿಗೆ, ಭಕ್ತರಿಗೆ ಪ್ರವೇಶ ನೀಡಲಿಲ್ಲ. ಇದರಿಂದ ದೂರದೂರಿನಿಂದ ಆಗಮಿಸಿದ್ದ ಭಕ್ತರು ನಿರಾಸೆಗೊಂಡರು. ಭಕ್ತರು, ದ್ವಾರಗೋಪುರದ ಬಾಗಿಲ ಬಳಿಯಿರುವ ಬಲಿಪೀಠದ ಮೇಲೆ ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ದೇಗುಲ ನಿರ್ಮಾಣದ ನಂತರ ಈವರಗೆ ದ್ವಾರಗೋಪುರದ ಬಾಗಿಲನ್ನು ಮುಚ್ಚಿರಲಿಲ್ಲ. ಹಲವು ವರ್ಷಗಳ ಹಿಂದೆ ಸಾಮೂಹಿಕವಾಗಿ ಪ್ಲೇಗ್, ಕಾಲರ ರೋಗ ಬಂದಿದ್ದ ಸಮಯದಲ್ಲೂ ಸಹ ದೇಗುಲದ ಬಾಗಿಲನ್ನು ಮುಚ್ಚಿರಲಿಲ್ಲ. ಇದೀಗ ಇದು ಅನಿವಾರ್ಯ ಎನ್ನಲಾಗಿದೆ. ದೇಗುಲದ ಬಾಗಿಲು ಇದೇ ಮಾರ್ಚ್ 31ರವರೆಗೆ ಮುಚ್ಚಲಿದೆ ಎಂದು ತಿಳಿಸಿದ್ದಾರೆ.