ನ್ಯೂಡೆಲ್ಲಿ: ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕಿನ ವಿರುದ್ಧ ನಮ್ಮ ದೇಶ ಬಹಳ ಧೈರ್ಯದಿಂದ ಹೋರಾಡುವ ಮೂಲಕ ವಿಶ್ವಕ್ಕೂ ಸಹಕಾರ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಲಾಕ್ಡೌನ್ ಘೋಷಣೆಯಾದ ಬಳಿಕ ಭಾನುವಾರ ಆಯೋಜಿಸಿದ್ದ 2ನೇ ಮನ್ ಕೀ ಬಾತ್ನಲ್ಲಿ ಮಾತನಾಡಿದ ಅವರು, ವೈದ್ಯರು, ಪೊಲೀಸ್ ಸೇರಿದಂತೆ ಕೊರೊನಾ ವಾರಿಯರ್ಸ್ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಅವರಿಗೆ ನಾವು ಗೌರವ ಸಲ್ಲಿಸಲೇ ಬೇಕು. ಅವರ ಕಾಯಕವನ್ನು ಜನ ಮತ್ತು ಜಗವೂ ಮೆಚ್ಚುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸುವು ದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ನಮ್ಮ ದೇಶ ವಿಶ್ವಕ್ಕೆ ಕೊರೊನಾ ವಿರುದ್ಧ ಹೋರಾಡಲು ಎಲ್ಲಾ ರೀತಿಯಲ್ಲೂ ಸ್ಪಂದಿಸುತ್ತಿದೆ. ವೈದ್ಯರು ಮತ್ತು ವೈದ್ಯ ಪರಿಕರಗಳ ಜತೆಗೆ ಬೇಕಾದ ತಾತ್ಕಾಲಿಕ ಔಷಧಗಳನ್ನು ಸರಬರಾಜು ಮಾಡುತ್ತಿದೆ ಎಂದು ಹೇಳಿದರು.
ಭಾರತ ಕೊರೊನಾ ವಿರುದ್ಧ ಹೋರಾಡುತ್ತಿರುವುದಕ್ಕೆ ಮತ್ತು ವಿಶ್ವಕ್ಕೆ ಬೇಕಾದ ಔಷಧ ಸರಬರಾಜು ಮಾಡುತ್ತಿರವುದಕ್ಕೆ ವಿಶ್ವದ ಹಲವು ರಾಷ್ಟ್ರಗಳು ಗೌರವ ಸಲ್ಲಿಸುತ್ತಿವೆ. ಅಲ್ಲದೇ ದೇಶದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳನ್ನು ಸ್ವಾಗತಿಸುವ ಮೂಲಕ ಹೊಗಳುತ್ತಿವೆ. ಅದೇ ರೀತಿ ದೇಶ ವಾಸಿಗಳು ಗೌರವಯುತವಾಗಿ ನಡೆದುಕೊಂಡಿರುವುದಕ್ಕೆ ತುಂಬ ಹೆಮ್ಮೆಯಿದೆ ಎಂದರು.
ಇನ್ನು ಇಂದು ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಆಚರಣೆ ಮಾಡುತ್ತಿದ್ದು, ಎಲ್ಲರೂ ಬಸವಣ್ಣನವರ ತತ್ವಾದರ್ಶ ಪಾಲಿಸಕಬೇಕು. ಅಲ್ಲದೆ ವಿಶ್ವಗುರುವಿನ ವಚನಗಳನ್ನು ಪಠಿಸುವ ಮೂಲಕ ಜಾತಿ ಮೇಲು ಕೀಳೆಂಬ ಭಾವನೆಯಿಂದ ಹೊರಬಂದು ನಾವು ಭಾರತೀಯರು ಎಂದು ಒಗ್ಗಟ್ಟಿನಿಂದ ದೇಶವನ್ನು ಮುನ್ನಡೆಸೋಣ ಎಂದು ಕರೆ ನೀಡಿದರು.
ನಮ್ಮ ಪಾರಂಪರಿಕ ಸಿದ್ಧಾಂತವನ್ನು ಪಾಲಿಸೋಣ, ಆಯುರ್ವೇದವನ್ನು ಕಡೆಗಣಿಸುವುದು ಸರಿಯಲ್ಲ. ನಾವು ಕಡೆಗಣಿಸಿದ್ದನ್ನು ವಿಶ್ವ ಅಂಗಿಕರಿಸುತ್ತಿದೆ. ನಮ್ಮ ಸಂಸ್ಕೃತಿಯನ್ನು ಮೊದಲು ನಾವು ಪಾಲಿಸಲು ಮರೆಯದಿರೋಣ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವಿರುದ್ಧ ಸಮರ ಸಾರೋಣ ಎಂದು ಸಲಹೆ ನೀಡಿದರು.