ಬೆಂಗಳೂರು: ದೇಶವಾಸಿಗಳೆಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ ಮನೆಯ ಲೈಟ್ ಆರಿಸಿ ಒಂಬತ್ತು ನಿಮಿಷಗಳ ಕಾಲ ದೀಪ ಹಚ್ಚಿ ಕೊರೊನಾ ವಿರುದ್ಧ ತಮ್ಮ ಒಗ್ಗಟ್ಟು ಸಾರಿದ್ದಾರೆ.
ಕೊರೊನಾ ಪೀಡಿತರ ಜತೆಗೆ ‘ನಾವಿದ್ದೇವೆ’ ಎಂದು ಸಾರಿ ಹೇಳಲು ಭಾನುವಾರ ರಾತ್ರಿ ಎಲ್ಲರೂ ಒಟ್ಟಾಗಿ ದೀಪ ಹಚ್ಚುವಂತೆ ಪ್ರಧಾನಿಗಳು ಕೊಟ್ಟಿದ್ದ ಕರೆಗೆ ದೇಶದ ಜನತೆ ಕಿವಿಯಾಗಿ ನಿಂತು ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಪ್ರಧಾನಿ ಮೋದಿ ಅವರು ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದ್ದು, ಅಮಿತ್ ಷಾ ಕೂಡ ಬೆಂಬಲವಾಗಿ ನಿಂತು ದೀಪ ಹಚ್ಚಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೀಪ ಬೆಳಗಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿರುವ ಸಂದೇಶವನ್ನು ಸಾರಿದ್ದಾರೆ.
ಅವರಂತೆಯೇ ಬಾಲಿವುಡ್, ಟಾಲಿವುಡ್ ಸ್ಯಾಂಡಲ್ವುಡ್ ಸ್ಟಾರ್ಗಳೂ ಸಹ ಮೋದಿ ಅವರು ಕೊಟ್ಟಿದ್ದ ಕರೆಗೆ ಓಗೊಟ್ಟು ಲೈಟ್ಗಳನ್ನು ಆರಿಸಿ ದೀಪಗಳನ್ನು ಹಚ್ಚಿ, ಕತ್ತಲನ್ನೂ ದೂರ ಮಾಡುವ ಮೂಲಕ ಕೊರೊನಾವನ್ನು ಬಂದ ದಾಯಲ್ಲೇ ಹಿಂದಿರುಗಿ ಹೋಗು ನಿನಗೆ ಯಾವುದೇ ಕಾಣಿಕೆ ಕೊಡಲು ನಾವು ಸಿದ್ಧರಿಲ್ಲ ಎಂಬ ಸಂದೇಶ ಸಾರುವ ಮೂಲಕ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಬಹುತೇಕ ಸೆಲೆಬ್ರಿಟಿಗಳು ದೀಪಗಳನ್ನು ಹಚ್ಚಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಕೊರೊನಾ ಬಾಹುಗಳು ಚಾಚಿದಾಗಿನಿಂದಲೂ ಶಾರುಖ್ ಖಾನ್, ರಜನಿಕಾಂತ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿ ಹಲವು ನಟರು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಲೇ ಇದ್ದಾರೆ. ಭಾನುವಾರ ಸಹ ಸರಿಯಾಗಿ ರಾತ್ರಿ ಬತ್ತು ಗಂಟೆಗೆ ಹಲವು ಸ್ಟಾರ್ ನಟ, ನಟಿಯರು ಮತ್ತು ರಾಜಕೀಯ ಮುಖಂಡರು ಸಿಎಂ ಯಡಿಯೂರಪ್ಪ ಹಾದಿಯಾಗಿ ಬಹುತೇಕ ಎಲ್ಲರೂ ದೀಪ ಹಿಡಿದು ನಿಂತು ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಕೆಆರ್ ಬಡಾವಣೆಯಲ್ಲಿ 104 ವರ್ಷದ ವಯೋವೃದ್ಧ ಪಿ ಸಂಜೀವ್ ರಾವ್ ಎಂಬುವರು ತಮ್ಮ ಕುಟುಂಬದವರೊಡನೆ ದೀಪಹಚ್ಚಿ ಮೋದಿಯವರಿಗೆ ಬೆಂಬಲ ಸೂಚಿಸಿದರು
ನಟ, ಬಿಜೆಪಿ ಸದಸ್ಯ ಜಗ್ಗೇಶ್ ಅವರು ಮೋದಿ ಕರೆ ಕೊಟ್ಟಂತೆ ದೀಪಗಳನ್ನೆಲ್ಲಾ ಆರಿಸಿ ದೀಪ ಹಚ್ಚಿದರು.
ದೀಪದ ಮೂಲಕವೇ ವೈದ್ಯರು, ಪೊಲೀಸರು, ಪೌರ ಕಾರ್ಮಿಕರಿಗೆ ಸೆಲ್ಯೂಟ್ ಹೊಡೆದಿದ್ದಾರೆ ನಟ ಸೃಜನ್ ಲೋಕೇಶ್. ದೀಪದಲ್ಲಿಯೇ ಡಿಪಿಡಬ್ಲು ಅಕ್ಷರಗಳನ್ನು ರಚಿಸಿದ್ದಾರೆ ಅವರು.
ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬದೊಂದಿಗೆ ಮೇಣದಬತ್ತಿ ಹಿಡಿದು ನಿಂತು ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದರು. ಅವರಂತೆ ದೇಶದ ಪ್ರತಿ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ದೀಪ ಹಚ್ಚುವ ಮೂಲಕ ವಿಶ್ವಹೆಮ್ಮಾರಿ ಕೊರೊನಾ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.