ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಕೊರೋನಾ ವೈರಾಣು ಸೋಂಕು ದೃಢಪಟ್ಟ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಿ, ಗ್ರಾಮಸ್ಥರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಗ್ರಾಮದ ಹೊರಗೆ ಹಾಗೂ ಒಳಗೆ ಯಾರಿಗೂ ಪ್ರವೇಶಿಸಲು ಅವಕಾಶವನ್ನು ನೀಡದೆ ಕಟ್ಟುನಿಟ್ಟಾಗಿ ಸೀಲ್ ಡೌನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಗ್ರಾಮಸ್ಥರಿಗೆ ಪ್ರತ್ಯೇಕ ಆಹಾರ ಧಾನ್ಯಗಳ ಉಚಿತ ಪೂರೈಕೆ ಹಾಗೂ ವೈದ್ಯಕೀಯ ಸೌಕರ್ಯ ಒದಗಿಸುವ ಜೊತೆಗೆ ವಿನೂತನ ರೀತಿಯಲ್ಲಿ ಹಣವನ್ನು ಪಡೆಯಲು ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೈಲನರಸಾಪುರ ಗ್ರಾಮದಲ್ಲಿ 950 ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮಸ್ಥರ ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಣವನ್ನು ಒದಗಿಸಲು ಕ್ರಮವಹಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ನ ಅಧಿಕಾರಿಗಳು ಒಬ್ಬ ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ಪ್ರತ್ಯೇಕವಾಗಿ ನೇಮಿಸಿದ್ದಾರೆ.
ಆಧಾರ್ ಸಂಖ್ಯೆ ಹಾಗೂ ಬೆರಳಚ್ಚುನ್ನು ಗ್ರಾಮದ ಪಂಚಾಯಿತಿ ಕಾರ್ಯಾಲಯದಲ್ಲಿ ನೀಡಿದರೆ, ಯಾವುದೇ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೂ ಹಣವನ್ನು ಪಡೆದುಕೊಳ್ಳಬಹುದು. ಪ್ರತಿದಿನ ರೂ. 50,000 ದಿಂದ ರೂ. 1 ಲಕ್ಷದ ವರೆಗೆ ಹಣವನ್ನು ಈ ವ್ಯವಹಾರಕ್ಕಾಗಿ ಬ್ಯಾಂಕ್ ನವರು ಮೀಸಲಿರಿಸಿದ್ದು, ಬೇಡಿಕೆಗೆ ಅನುಗುಣವಾಗಿ ಹಣವನ್ನು ನಮೂದಿಸಿ ಟೋಕನ್ ಜನರೇಟ್ ಆದ ಬಳಿಕ ಸಂಬಂಧಪಟ್ಟ ಗ್ರಾಮಸ್ಥರ ಮನೆ ಬಾಗಿಲಿಗೆ ಹಣ ತಲುಪಲಿದೆ.
ಮನೆ ಬಾಗಿಲಿಗೆ ಹಣವನ್ನು ತಲುಪಿಸುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ತಮ್ಮ ಹಣ ಸುರಕ್ಷಿತವಾಗಿದೆ ಎಂದು ಭಾವನೆ ಮೂಡಿಸಿ ಆತ್ಮ ಸ್ಥೈರ್ಯ ತುಂಬುವ ಸಣ್ಣ ಪ್ರಯತ್ನ ಹಾಗೂ ಗ್ರಾಮದಲ್ಲಿ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡಲು ಕಲ್ಪಿಸಿರುವ ವ್ಯವಸ್ಥೆಯಲ್ಲಿ ಖರೀದಿಗೆ ಹಣದ ನೆರವು. ಬೈಲನರಸಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ತಮ್ಮ ಬೆರಳಚ್ಚುನ್ನು ನೀಡಲು ಬರುವ ಗ್ರಾಮಸ್ಥರಿಗೆ ಕೈ ಶುಚಿಗೊಳಿಸಲು ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು,
ಕಾಯ್ದುಕೊಳ್ಳಲಾಗುತ್ತಿದೆ ಸಾಮಾಜಿಕ ಅಂತರ
ಬೈಲನರಸಾಪುರ ಪಂಚಾಯಿತಿ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಗ್ರಾಮಸ್ಥರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪರಿಹಾರವನ್ನು ಕಂಡುಕೊಳ್ಳಬಹುದು. ಗ್ರಾಮದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳಲು ವಿಪತ್ತು ನಿರ್ವಹಣಾ ಕಾಯ್ದೆಯಡಿ ದೊಡ್ಡಬಳ್ಳಾಪುರ ಉಪ ವಿಭಾಗದ ಉಪ ವಿಭಾಗಾಧಿಕಾರಿ ಮಂಜುನಾಥ್ ಅವರನ್ನು ವಿಶೇಷಾಧಿಕಾರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇಮಿಸಿದ್ದಾರೆ.
ಗ್ರಾಮಸ್ಥರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ವೈರಾಣು ಸೋಂಕು ತಡೆಗಟ್ಟಲು ಸಂಪೂರ್ಣವಾಗಿ ಸಹಕರಿಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗುವುದರ ಜೊತೆಗೆ ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಹಾಗೂ ಹೊಸಕೋಟೆ ತಾಲೂಕು ಆಡಳಿತದ ಪರಿಶ್ರಮಕ್ಕೆ ಸಿಕ್ಕಿ ಪ್ರತಿಫಲ.