ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟ ಯುವಜನಾಂಗಕ್ಕೆ ಸ್ಪೂರ್ತಿಯಾಗಬೇಕು. ಯುವಜನತೆಯು ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಹಾಗೂ ಚಿಂತನೆಗಳನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ವಿಧಾನಸೌಧದ ಎದುರಿಗೆ ಇರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಅವರ 129 ನೇ ಜನ್ಮ ದಿನಾಚಣೆಯ ಅಂಗವಾಗಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರದು ಬಹುಮುಖಿ ಸಾಮಥ್ರ್ಯದ ಅಸಾಧಾರಣ ವ್ಯಕ್ತಿತ್ವ. ಶ್ರೇಷ್ಠ ಆರ್ಥಿಕ ತಜ್ಞ. ಸಾಮಾಜಿಕ ಪರಿವರ್ತನೆಯ ಹರಿಕಾರ, ಸಮಾನತೆಯ ಹರಿಕಾರ. ತಳಸಮುದಾಯಗಳ ವಿಮೋಚಕಾಗಿದ್ದಾರೆ.
ಭಾರತ ಸಂವಿಧಾನದ ಉದಾರವಾದಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರದ ಚಿಂತಕರಲ್ಲಿ ಪ್ರಮುಖ ಹೆಸರು ಇವರದ್ದಾಗಿದೆ. ಎಲ್ಲಾ ಬಗೆಯ ತಾರತಮ್ಯಗಳನ್ನು ಇನ್ನಿಲ್ಲವಾಗಿಸುವುದು ಮತ್ತು ಜ್ಯಾತ್ಯತೀತ ಭಾರತ ನಿರ್ಮಾಣ ಮಾಡುವುದು ಅವರ ಕನಸು ಆಗಿತ್ತು. ಧಮನಿತರ ಧ್ವನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೆಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕರಾಗಿದ್ದಾರೆ. ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಎಲ್ಲಾ ಚಳುವಳಿಗಳಿಗೆ ಇಂದಿಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳೇ ಬಳುವಳಿಯಾಗಿವೆ ಎಂದರು.
ಇನ್ನಷ್ಟು ಅಧ್ಯಯನವಾಗಬೇಕು
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಇನ್ನಷ್ಟು ಅಧ್ಯಯನವಾಗಬೇಕು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೊತ್ತು ಭಾರತ ಸಂವಿಧಾನವನ್ನು ಇತರ ದೇಶಗಳು ಅನುಸರಿಸುತ್ತಿವೆ ಹಾಗೂ ಅನುಕರಿಸುತ್ತಿವೆ. ತಮ್ಮ ನೇತೃತ್ವದ ರಾಜ್ಯ ಸರ್ಕಾರ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ಬದ್ದವಾಗಿದೆ. ಅವರ ತತ್ವ ಆದರ್ಶಗಳ ಹಾದಿಯಲ್ಲಿ ನಡೆಯುವ ದೃಡ ಸಂಕಲ್ಪ ಹೊಂದಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಅಂಬೇಡ್ಕರ್ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ
ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಿ.ಎಸ್. ವೀರಯ್ಯ, ಮಾಜಿ ಸಚಿವ ಆಂಜನೇಯ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಮುಖ್ಯಕಾರ್ಯದರ್ಶಿ, ಟಿ.ಎಂ. ವಿಜಯಬಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ಆರ್. ಎಸ್. ಪೆದ್ದಪ್ಪಯ್ಯ, ಎಸ್ಸಿಪಿ ಮತ್ತು ಟಿಎಸ್ಪಿಯ ಯೋಜನೆಯ ಸಲಹೆಗಾರ ಇ. ವೆಂಕಟಯ್ಯ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.