ಬೆಂಗಳೂರು: ಮಲೆನಾಡಿನಲ್ಲಿ ಈ ವರ್ಷ ಮಂಗನ ಕಾಯಿಲೆ ತೀವ್ರವಾಗಿ ಪಸರಿಸುತ್ತಿದ್ದು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಂತೂ ಗಂಭೀರ ಸ್ವರೂಪ ಪಡೆಯುತ್ತಿದೆ ಹೀಗಾಗಿ ತುರ್ತಾಗಿ ಮಂಗನಕಾಯಿಲೆ ಸಂಶೋಧನಾ ಕೇಂದ್ರ ಸ್ಥಾಪಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮನವಿ ಮಾಡಿದ್ದಾರೆ.
ಮುಂಗಾರಿನ ಆರಂಭದವರೆಗೂ ರೋಗ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ರೋಗಪೀಡಿತ ಪ್ರದೇಶಗಳಿಗೆ ಭೇಟಿಯಿತ್ತು, ಸಂಬಂಧ ಪಟ್ಟ ಎಲ್ಲರೊಂದಿಗೆ ಚರ್ಚಿಸಿ, ವಾಸ್ತವಾಂಶ ಅರಿಯಲು ಯತ್ನಿಸಿದ್ದು ಸರ್ಕಾರವು ಈಗಾಗಲೇ ರೋಗ ನಿಯಂತ್ರಿಸುವ ಕುರಿತು ಹಲವು ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆಎಂದು ಹೇಳಿದರು.
ಈ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಉದ್ದೇಶದಿಂದ ಸಂಶೋಧನೆ ನಡೆಸಲು, ಶಿವಮೊಗ್ಗ ಜಿಲ್ಲೆಯಲ್ಲಿ“ಮಂಗನಕಾಯಿಲೆ ಸಂಶೋಧನಾಕೇಂದ್ರ” ವನ್ನು ಸ್ಥಾಪಿಸಲು ಮಂಜೂರಾತಿ ನೀಡಿ, ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಕೇಂದ್ರ ಆರಂಭಿಸಿಲ್ಲ. ಆದ್ದರಿಂದ ಸಿಘ್ರವಾಗಿ ಕೇಂದ್ರ ತೆರೆಯಬೇಕು ಎಂದು ಕೇಳಿಕೊಂಡಿದ್ದಾರೆ.
ಈರೋಗದ ವೈರಾಣುಗಳ ಮೂಲ ಆಕಾರ ಪ್ರಾಣಿಗಳು ಹಾಗೂ ಪ್ರಸರಣಾ ವಿಧಾನಗಳ ಕುರಿತು, ಇಂದಿಗೂ ಮಾಹಿತಿ ಕಡಿಮೆಯಿದೆ. ಆದ್ದರಿಂದ ಸೋಂಕುಶಾಸ್ತ್ರ, ರೋಗನಿಧಾನಶಾಸ್ತ್ರ ಹಾಗೂ ಪರಿಸರಶಾಸ್ತ್ರ ತಜ್ಞರುಗಳ ಮೂಲಕ ವಿಸ್ತೃತವಾದ ಅಧ್ಯಯನ ಕೈಗೊಳ್ಳುವ ಅಗತ್ಯವಿದೆಯೆಂದು ತಿಳಿಸಿದ್ದಾರೆ.
ತಜ್ಞರ ಶಿಫಾರಸಿನಲ್ಲಿ ಈ ಕೆಳಗಿನ ತುರ್ತು ಕ್ರಮ ಕುರಿತು ಮನವಿ
ರೋಗ ಪೀಡಿತ ಶಿವಮೊಗ್ಗ(ತೀರ್ಥಹಳ್ಳಿ, ಹೊಸನಗರ, ಸಾಗರತಾಲ್ಲೂಕು) ಹಾಗೂ ಉತ್ತರಕನ್ನಡ ಜಿಲ್ಲೆಯ(ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯ್ಡಾತಾಲ್ಲೂಕು) ಹಳ್ಳಿಗಾಡು ಪ್ರದೇಶಗಳಿಗೆ, ತಜ್ಞರುಗಳ ತಂಡ ಭೇಟಿಯಿತ್ತು, ಹಂದಿ, ಮುಳ್ಳುಹಂದಿ, ಅಳಿಲು, ಇಲಿ, ಹೆಗ್ಗಣ, ಮೊಲದಂಥಕಾಡು ಪ್ರಾಣಿಗಳು ಹಾಗೂ ನಾಯಿ, ಬೆಕ್ಕು, ಆಕಳು, ಎಮ್ಮೆಯಂಥಾ ಸಾಕು ಪ್ರಾಣಿಗಳಿಂದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ಕೈಗೊಳ್ಳಬೇಕಿದೆ. ಇದು ವೈರಾಣುವಿನ ಮೂಲ ಕಂಡುಹಿಡಿಯಲು ಸಹಾಯ ಮಾಡಬಲ್ಲದು, ರೋಗ ತೀವ್ರವಾಗಿರುವ ಈ ಸಂದರ್ಭದಲ್ಲಿಯೇ ಈ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ನೀಡಿದ ಅಭಿಪ್ರಾಯಗಳನ್ನು ನೀಡಿದರು.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ತುರ್ತಾಗಿ ತಜ್ಞರ ತಂಡವನ್ನು ಮಂಗನಕಾಯಿಲೆ ಪೀಡಿತ ಸ್ಥಳಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಬಿಎಸ್‌ವೈ ಸೂಚನೆ ನೀಡಿದರು.
ವೈದ್ಯಕೀಯ ಸಚಿವ ಡಾ.ಸುಧಾಕರ್, ಆರೋಗ್ಯ ಇಲಾಖೆಯ ಆಯುಕ್ತರು, ಪಂಕಜ್ ಪಾಂಡೆರವರಿಗೆ ಅನಂತ ಹೆಗಡೆ ಅಶೀಸರ ಈ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆ-ಸಾಗರ, ತೀರ್ಥಹಳ್ಳಿ, ಸಿದ್ದಾಪುರ ತಾಲ್ಲೂಕುಗಳ ಮಂಗನಕಾಯಿಲೆ ಪೀಡಿತ ಪ್ರದೇಶದ ಕಾಡುಗಳಿಗೆ ತಜ್ಞರತಂಡ ಭೇಟಿ ನೀಡಿ ವನ್ಯಜೀವಿಗಳ ದೇಹದ್ರವ್ಯಗಳ ನಮೂನೆ ಸಂಗ್ರಹಿಸಿ ಕಾರ್ಯಪ್ರವೃತ್ತರಾಗಲು ಅಗತ್ಯ ಕ್ರಮಕ್ಕೆ ಮುಂದಾಗಲಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಕ್ತರ್ ತಿಳಿಸಿದರು. ಈಗಾಗಲೇ ತಿಳಿದಿರುವಂತೆ ಮಲೆನಾಡಿನಲ್ಲಿ ಮಂಗನಕಾಯಿಲೆ ವ್ಯಾಪಿಸಿದ್ದು, ಆ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.