ಬೆಂಗಳೂರು: ದಮನಿತ ಮಹಿಳೆಯರಿಗಾಗಿ ಕೌಶಲ್ಯ ತರಬೇತಿ ಮತ್ತು ಘಟಕ ಸ್ಥಾಪನೆ ಕ್ರಮವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಡಾ. ಜಯಮಾಲ ರಾಮಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2019-20ನೇ ಸಾಲಿನಲ್ಲಿ 11.50 ಕೋಟಿ ರೂ. ಅನುದಾನದ ಪೈಕಿ 1000 ದಮನಿತ ಮಹಿಳೆಯರಿಗೆ ತರಬೇತಿ ನೀಡಲು ಅಗತ್ಯವಿರುವ ಅನುದಾನ ರೂ. 3.50 ಕೋಟಿಗಳಲ್ಲಿ ವೆಚ್ಚ ಭರಿಸಲು ಅನುಮೋದನೆ ದೊರಕಿದೆ ಹಾಗೂ 1.50 ಕೋಟಿ ರೂ. ಮಹಿಳಾ ತರಬೇತಿ ಯೋಜನೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.
ದಮನಿತ ಮಹಿಳೆಯರ ಘಟಕ ಪ್ರಾರಂಭಿಸಲು 10 ಕೋಟಿ ರೂ. ಗಳನ್ನು ಒದಗಿಸಿದ್ದು, ಇದು ಬಂಡವಾಳ ಶೀರ್ಷಿಕೆ ಅಡಿ ಭರಿಸಲು ಸಾಧ್ಯವಾಗದ ಕಾರಣ ರಾಜಸ್ವ ಲೆಕ್ಕಶೀರ್ಷಿಕೆಯಡಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯನ್ನು ಕೋರಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದರು.
2020-21ನೇ ಸಾಲಿನಲ್ಲಿ ಚೇತನ ಯೋಜನೆಯಡಿ ಒದಗಿಸಲಾಗಿರುವ 4 ಕೋಟಿ ರೂ. ಗಳ ಪೈಕಿ 2 ಕೋಟಿ ರೂ. ಗಳನ್ನು ದಮನಿತ ಮಹಿಳೆಯರ ಘಟಕ ಸ್ಥಾಪನೆ ಮಾಡಲು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
2019-20ನೇ ಸಾಲಿನಲ್ಲಿ ಪರಿಸಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಡಿ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆಯಡಿ ಅನುಕ್ರಮವಾಗಿ ಪರಿಶಿಷ್ಟ ಜಾತಿಗೆ ಸಾರಿದ ಫಲಾನುಭವಿಗಳಿಗೆ 15.54 ಕೋಟಿ ರೂ. ಮತ್ತು 3 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಫಲನಾನುಭವಿಗಳಿಗೆ 8 ಕೋಟಿ ಮತ್ತು 50 ಕೋಟಿ ರೂ. ನಿಗದಿಯಾಗಿದೆ. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ದಮನಿತ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸದನದಲ್ಲಿ ತಿಳಿಸಿದರು.